ಕೆಜಿಎಫ್-2 ಚಿತ್ರದ ರಿಲೀಸ್ ಗೆ ಕಾದಿರೋ ನ್ಯಾಷನಲ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಹಬ್ಬಕ್ಕೆ ಮುನ್ನವೇ ಹೋಳಿಗೆ ಸಿಕ್ಕಲಿದೆ. ಹೌದು ಕೆಜಿಎಎಫ್-2 ಗೂ ಮುನ್ನ ಯಶ್ ಹಳೆಯ ಚಿತ್ರವೊಂದು ತೆಲುಗಿನಲ್ಲಿ ಡಬ್ ಆಗಲಿದ್ದು ಮರುಬಿಡುಗಡೆಗೆ ದಿನಾಂಕ ನಿಗದಿ ಯಾಗಿದೆ.

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಸಧ್ಯ ಕನ್ನಡ, ತೆಲುಗು, ತಮಿಳು, ಹಿಂದಿ ಹೀಗೆ ಭಾಷೆಯ ಗಡಿದಾಟಿ ನ್ಯಾಶನಲ್ ಸ್ಟಾರ್ ಎನ್ನಿಸಿಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬರೆದ ಕೆಜಿಎಫ್ ಸಿಕ್ವೆನ್ಸ್ 2 ರಿಲೀಸ್ ಗೂ ಮುನ್ನವೇ ನೊರೆಂಟು ದಾಖಲೆ ಬರೆದಿದೆ.

ಈ ಮಧ್ಯೆ ಯಶ್ ಅಭಿಮಾನಿಗಳ ಆಸೆಯಂತೆ ಯಶ್ ನಟಿಸಿದ್ದ 2014 ರಲ್ಲಿ ತೆರೆಕಂಡ ಗಜಕೇಸರಿಯನ್ನು ತೆಲುಗಿನಲ್ಲಿ ಡಬ್ ಮಾಡಿ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಈಗಾಗಲೇ ಗಜಕೇಸರಿ ಚಿತ್ರದ ತೆಲುಗು ಟೀಸರ್ ರಿಲೀಸ್ ಆಗಿದ್ದು, ಅದರಲ್ಲಿ ಆಫ್ಟರ್ ಕೆಜಿಎಫ್ ಎಂದು ಸೇರಿಸಲಾಗಿದೆ. ಇದೇ ಮಾರ್ಚ್ 5 ರಂದು ಗಜಕೇಸರಿ ಚಿತ್ರ ತೆಲುಗು ಭಾಷೆಯ ಎರಡು ರಾಜ್ಯದಲ್ಲಿ ರಿಲೀಸ್ ಆಗಲಿದೆ.

ಹದವಾದ ಹಾಸ್ಯ, ನವಿರಾದ ಹಾಡುಗಳು ಹಾಗೂ ಸಖತ್ ಫೈಟ್ಸ್ ಇರೋ ಗಜಕೇಸರಿ ಚಿತ್ರ ಕನ್ನಡದಲ್ಲಿ ಸಖತ್ ಹೆಸರು ಮಾಡಿತ್ತು. ಈಗ ಡಬ್ ಮಾಡಿ ತೆಲುಗು ಪ್ರೇಕ್ಷಕರ ಮನಗೆಲ್ಲುವ ಪ್ಲ್ಯಾನ್ ಸಿದ್ಧವಾಗಿದೆ.

ಗಜಕೇಸರಿ ಎಸ್.ಕೃಷ್ಣ ನಿರ್ದೇಶಿಸಿದ್ದು ಅಮೂಲ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅನಂತ ನಾಗ್, ರಂಗಾಯಣ ರಘು, ಸಾಧುಕೋಕಿಲ, ಗಿರಿಜಾ ಲೊಕೇಶ್, ಮಂಡ್ಯ ರಮೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಕೆಜಿಎಫ್-2 ಜುಲೈ 16 ಕ್ಕೆ ರಿಲೀಸ್ ಆಗಲಿದ್ದು ಅದಕ್ಕೂ ಮುನ್ನ ಯಶ್ ಅಭಿಮಾನಿಗಳನ್ನು ರಂಜಿಸಲು ಗಜಕೇಸರಿ ಸಿದ್ಧವಾಗಿದೆ.