ಬೆಂಗಳೂರು : ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಟಿ ರಾಗಿಣಿ ದ್ವಿವೇದಿಯನ್ನು ವಶಕ್ಕೆ ಪಡೆದಿರುವ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ರಾಗಿಣಿ ಅವರ ಪೊಲೀಸ್ ಕಸ್ಟಡಿ ಅವಧಿ ನಾಳೆಗೆ ಮುಕ್ತಾಯವಾಗ ಲಿದ್ದು, ಮತ್ತೆ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆಯಲು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಯಿದೆ.

ಡ್ರಗ್ಸ್ ದಂಧೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟಿ ರಾಗಿಣಿ ದ್ವಿವೇದಿ ಕಳೆದೆರಡು ದಿನಗಳ ವಿಚಾರಣೆಯಲ್ಲಿ ತಮ್ಮ ಪಾತ್ರವಿಲ್ಲ ಎಂದೇ ಹೇಳಿದ್ದಾರೆ. ಯಾವುದೇ ವಿಚಾರವನ್ನೂ ರಾಗಿಣಿ ಬಾಯ್ಬಿಟ್ಟಿಲ್ಲ ಎನ್ನಲಾಗುತ್ತಿದೆ. ಡ್ರಗ್ಸ್ ದಂಧೆ ಪ್ರಕರಣ ಗಂಭೀರ ಸ್ವರೂಪವನ್ನು ಪಡೆಯುತ್ತಿದ್ದು, ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಹಲವರ ವಿರುದ್ದ ಆರೋಪಗಳು ಕೇಳಿಬರುತ್ತಿದೆ. ಡ್ರಗ್ಸ್ ದಂಧೆಯಲ್ಲಿ ದಿನಕ್ಕೊಂದು ಹೆಸರುಗಳು ಸೇರ್ಪಡೆಯಾಗುತ್ತಲೇ ಇದೆ.

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಇದೀಗ ಬಾಲಿವುಡ್ ಹಾಗೂ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೂ ಲಿಂಕ್ ಆಗುತ್ತಿದೆ. ಈಗಾಗಲೇ ಎನ್ ಸಿಬಿ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ರಾಗಿಣಿ ಅವರನ್ನು ಇನ್ನಷ್ಟು ತೀವ್ರ ವಿಚಾರಣೆಗೆ ಒಳಪಡಿಸುವುದು ಖಚಿತ.