Kantara Movie leaks : ಒಂದೆಡೆ ಸ್ಯಾಂಡಲ್ ವುಡ್ ನಲ್ಲಿ ಕಾಂತಾರ ಸಿನಿಮಾ ಸಖತ್ ಸದ್ದುಮಾಡುತ್ತಿದೆ. ಈಗಾಗಲೇ ಕೋಟಿ ಕ್ಲಬ್ ಸೇರಿರೋ ಸಿನಿಮಾ ಇನ್ನಷ್ಟು ದಾಖಲೆ ಬರೆಯೋ ಮುನ್ಸೂಚನೆ ನೀಡಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಂತೂ ಕಾಂತಾರ ಸಿನಿಮಾದ್ದೇ ಸದ್ದು.ಕಾಂತಾರಾ ಸಿನಿಮಾ, ತುಳುನಾಡಿನ ನಂಬಿಕೆ, ಭೂತ ಕೋಲ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಇದೆಲ್ಲದರ ಮಧ್ಯೆ ಎಲ್ಲ ಯಶಸ್ವಿ ಸಿನಿಮಾಗಳಂತೆ ಕಾಂತಾರಕ್ಕೂ ಪೈರಸಿ ಕಾಟ ಎದುರಾಗಿದ್ದು ಸಿನಿಮಾ ತಂಡ ಆಘಾತ ಎದುರಿಸುತ್ತಿದೆ.
ಶುಕ್ರವಾರ ತೆರೆಕಂಡ ಕಾಂತಾರ ಸಿನಿಮಾ ಸಖತ್ ಹಿಟ್ ಹಾದಿಯತ್ತ ಸಾಗಿದೆ. ಪರಂಪರೆ, ಸಂಸ್ಕೃತಿ, ಕಾಡುಗಳ್ಳತನದ ಹೋರಾಟ, ನಂಬಿಕೆ, ತುಳುವ ಸಂಸ್ಕೃತಿ ಹೀಗೆ ನಾನಾ ಆಯಾಮಗಳಲ್ಲಿ ಸಾಗುವ ಕಥಾಹಂದರ ಪ್ರೇಕ್ಷರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ. ಆದರೆ ಸಿನಿಮಾ ಥಿಯೇಟರ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗಲೇ ಪೈರಸಿ ಕಾಟವೂ ಜೋರಾಗಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಯಲ್ಲಿ ತೆರೆ ಕಂಡಿರೋ ಸಿನಿಮಾದ ಥಿಯೇಟರ್ ಪ್ರಿಂಟ್ ಈಗ ಎಲ್ಲೆಡೆ ಹರಿದಾಡಲಾರಂಭಿಸಿದೆ.
ಥಿಯೇಟರ್ ಪ್ರಿಂಟ್ ಗಳನ್ನು ಚಿತ್ರೀಕರಿಸಿದ ಕಿಡಿಗೇಡಿಗಳು ಇನ್ ಸ್ಟಾಗ್ರಾಂ ಸೇರಿದಂತೆ ಹಲವು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ರಾಜ್ ಬೀಟ್ ( raj beat) ವಾಟರ್ ಮಾರ್ಕ್ ಇರೋ ಸಿನಿಮಾದ ಪೈರಸಿ ಕಾಪಿ ಎಲ್ಲೆಡೆ ಹರಿದಾಡುತ್ತಿದ್ದು, ಹಲವು ಯೂಟ್ಯೂಬ್ ಚಾನೆಲ್ ಗಳಲ್ಲೂ ಸಿನಿಮಾ ನೋಡುಗರಿಗೆ ಲಭ್ಯವಾಗುತ್ತಿದೆ.
ಇನ್ನು ಪೈರಸಿ ತಡೆಯಲು ಹೊಂಬಾಳೆ ಫಿಲ್ಮ್ಸ್ ಸೇರಿದಂತೆ ಹಲವು ತಂಡಗಳು ಸರ್ಕಸ್ ನಡೆಸಿವೆ. ಈ ಮಧ್ಯೆ ಪೈರಸಿ ಬಗ್ಗೆ ಆತಂಕ ವ್ಯಕ್ತಪಡಿಸಿರೋ ಕಾಂತಾರಾ ನಟ ಹಾಗೂ ನಿರ್ದೇಶಕ ರಿಶಬ್ ಶೆಟ್ಟಿ, ದಯವಿಟ್ಟು ಥಿಯೇಟರ್ ನಲ್ಲಿ ಮೊಬೈಲ್ ಬಳಕೆ ಮಾಡುವಾಗ ಎಚ್ಚರವಾಗಿರಿ. ನಿಮ್ಮ ಖುಷಿ ಹಂಚುವ ಭರದಲ್ಲಿ ಸಿನಿಮಾದ ಪ್ರಮುಖ ದೃಶ್ಯಗಳನ್ನು ಶೇರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಅದರೂ ಕಾಂತಾರಾ ಪೈರಸಿ ಕಾಪಿ ಹರಿದಾಟ ಮಾತ್ರ ನಿಂತಿಲ್ಲ. ಕೇವಲ ಕಾಂತಾರ ಮಾತ್ರವಲ್ಲ ಇತ್ತೀಚಿಗೆ ತೆರೆಕಂಡ ಕಿಚ್ಚ ಸುದೀಪ್ ತ್ರೀಡಿ ಸಿನಿಮಾ ವಿಕ್ರಾಂತ ರೋಣಾಗೂ ಪೈರಸಿ ಕಾಟ ಎದುರಾಗಿತ್ತು. ಒಟ್ಟಿನಲ್ಲಿ ಒಳ್ಳೆ ಗಳಿಕೆಯ ಭರವಸೆ ಮೂಡಿಸಿರೋ ಕಾಂತಾರಗೆ ಈಗ ಪೈರಸಿಯೇ ಕಾಟವಾಗಿ ಕಾಡ್ತಿದ್ದು, ಲಿಂಕ್ ಶೇರ್ ಮಾಡೋರ ಮೇಲೆ ಕ್ರಮಕೈಗೊಳ್ಳೋಕೆ ಚಿತ್ರತಂಡ ಒತ್ತಾಯಿಸುತ್ತಿದೆ.
Kantara Movie leaks viral on social media