ಕೊನೆಗೂ ಅಂದುಕೊಂಡಂತೆ ಮತ್ತೊಮ್ಮೆ ಮಂಡ್ಯ ಚುನಾವಣಾ ಕಣ ರಂಗೇರುವ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ಜೆಡಿಎಸ್ ಮತ್ತು ಸುಮಲತಾ ನಡುವಿನ ನೇರ ಹಣಾಹಣಿಗೆ ವೇದಿಕೆಯಾಗಿರುವ ಮಂಡ್ಯದಲ್ಲೇ ಅಭಿಷೇಕ ಅಂಬರೀಶ್ ಕೂಡ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಲು ಸಿದ್ಧ ಎಂದಿದ್ದು ಸಂಚಲನಕ್ಕೆ ಕಾರಣವಾಗಿದೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಳುಗನ ಹಳ್ಳಿಗೆ ಆಗಮಿಸಿದ್ದ ಅಭಿಷೇಕ್ ಅಂಬರೀಶ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ಜನರು ಬಯಸಿದರೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಾನು ಸಿದ್ಧ ಎಂದಿದ್ದಾರೆ. ಆ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯ ಕಣಕ್ಕೆ ಪಕ್ಷೇತರರಾಗಿ ಸ್ಪರ್ಧಿಸುವ ಇರಾದೆ ತೋರಿದ್ದಾರೆ ಅಭಿಷೇಕ.

ಭವಿಷ್ಯದಲ್ಲಿ ಏನಾಗುತ್ತೆ ಅನ್ನೋದನ್ನು ಈಗ ಹೇಳೋದು ಕಷ್ಟ. ಕಳೆದ ವಾರ ಕರ್ನಾಟಕದ ಸಿಎಂ ಬದಲಾಗ್ತಾರೆ ಅಂತ ಯಾರಿಗಾದ್ರೂ ಗೊತ್ತಿತ್ತಾ. ಹಾಗಾಗಿ ಭವಿಷ್ಯ ಏನು ಅಂತ ಹೇಳೋದು ಕಷ್ಟ. ಜನ ಬಯಸಿದರೇ ರಾಜಕಾರಣಕ್ಕೆ ಬರೋಕೆ ನಾನು ಸಿದ್ಧ. ಮಂಡ್ಯದ ಎಲ್ಲ ಕ್ಷೇತ್ರಗಳಿಗೂ ಒಳ್ಳೆಯ ಜನಪ್ರತಿನಿಧಿಗಳು ಸಿಗಬೇಕು. ಕ್ಷೇತ್ರದ ಅಭಿವೃದ್ಧಿಯಾಗಬೇಕು ಅನ್ನೋದು ನಮ್ಮ ಆಸೆ ಎಂದಿದ್ದಾರೆ.

ಸುಮಲತಾ ಹಾಗೂ ಕುಮಾರಸ್ವಾಮಿ ನಡುವೆ ಕೆ.ಆರ್.ಎಸ್ ವಿಚಾರಕ್ಕೆ ಗಲಾಟೆಯಾದಾಗಲೇ ಸುಮಲತಾ ಅಭಿಮಾನಿಗಳು ಪ್ರತ್ಯೇಕ ಪಕ್ಷ ಸ್ಥಾಪಿಸುವಂತೆ ಅಭಿಮಾನಿಗಳು ಒತ್ತಡ ಹೇರಿದ್ದು, ಪಕ್ಷ ಸ್ಥಾಪಿಸಿ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿ ನಿಲ್ಲಿಸಿ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದಿದ್ದರು.

ಹೀಗಾಗಿ ಬಹುತೇಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಮಂಡ್ಯದ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದ್ದು, ನಿಖಿಲ್ ಎದುರಾಳಿಯಾಗಿ ಅಭಿಷೇಕ್ ಅಂಬರೀಶ್ ಸ್ಪರ್ಧಿಸಿ ಗೆದ್ದು ಬರುವ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗುತ್ತಿದೆ.

ಸುಮಲತಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ವೇಳೆಯೂ ಅಭಿಷೇಕ ಅಂಬರೀಶ್ ತಾಯಿಯೊಂದಿಗೆ ನಿಂತು ಪ್ರಚಾರದ ಸೇರಿದಂತೆ ಎಲ್ಲ ಜವಾಬ್ದಾರಿ ಹೊತ್ತು ಕೆಲಸ ಮಾಡಿ ತಾಯಿಯನ್ನು ಗೆಲ್ಲಿಸಿಕೊಂಡು ಬಂದಿದ್ದರು. ಹೀಗಾಗಿ ವಿಧಾನಸಭಾ ಚುನಾವಣೆ ಕಣಕ್ಕೆ ಜ್ಯೂನಿಯರ್ ರೆಬೆಲ್ ಬರೋದು ಬಹುತೇಕ ಖಚಿತ ಎನ್ನಲಾಗ್ತಿದೆ.