ಇತ್ತೀಚಿನ ದಿನಗಳಲ್ಲಿ ಹೊಸಬರ ಹೊಸತನದ ಸಿನಿಮಾಗಳು ಚಂದನವನದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಮಾತ್ರವಲ್ಲ ಸಿನಿಮಾಗಳು ಭರ್ಜರಿ ಗೆಲುವಿನ ಮೂಲಕ ಸ್ಟಾರ್ ನಟರ ಸಿನಿಮಾಗಳಿಗೂ ಪೈಪೋಟಿ ಕೊಡ್ತಿವೆ. ಇದೀಗ ಹೊಸಬರ ಚಿತ್ರತಂಡವೊಂದು ‘ಓಬಿರಾಯನ ಕಥೆ’ ಹೇಳಲು ಹೊರಟಿದೆ. ಹೊಸಬರ ಹೊಸ ತಂಡಕ್ಕೆ ರಾಕಿಂಗ್ ಸ್ಟಾರ್ ಯಶ್ ಸಾಥ್ ಕೊಟ್ಟಿದ್ದಾರೆ.

ಐಟಿ ಕಂಪನಿಯಲ್ಲಿ ಉತ್ತಮ ಹುದ್ದೆಯನ್ನ ಬಿಟ್ಟು, ಸಿನಿಮಾದ ಒಲವಿನಿಂದ ಸ್ಯಾಂಡಲ್ ವುಡ್ ಗೆ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಡಲು ರೆಡಿಯಾಗಿದ್ದಾರೆ ವಿನಯ್ ಶಾಸ್ತ್ರೀ. ಬೆಂಗಳೂರಿನವರೇ ಆದ ವಿನಯ್ ಸಾಕಷ್ಟು ವರ್ಷದಿಂದ ರಂಗಭೂಮಿಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು, ತಮ್ಮದೇ ಆದ ರಂಗ ತಂಡವನ್ನು ಕಟ್ಟಿ, ಸಾಕಷ್ಟು ನಾಟಕ ಷೋ ಗಳನ್ನು ಮಾಡಿರೋ ಅನುಭವ ಸಹ ಹೊಂದಿದ್ದಾರೆ.
ಹಲವಾರು ಸಿನಿಮಾಗಳಿಗೆ ಕೆಲಸ ಮಾಡಿರೋ ವಿನಯ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದಲ್ಲದೇ, ಅಳಿದು ಉಳಿದವರು ಸಿನಿಮಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ. ನಾಟಕ ಮತ್ತು ಕಿರುಚಿತ್ರಗಳ ಮೂಲಕ ನಿರ್ದೇಶನದ ಅನುಭವ ಪಡೆದುಕೊಂಡು ಚಂದನವನದಲ್ಲಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ.

ಈ ಓಬಿರಾಯನ ಕಥೆಗೆ ಶಾಮ್ ಆರೂರು ಬಂಡವಾಳ ಹೂಡುತಿದ್ದು, ಇವರೂ ಸಹ ಈ ಸಿನಿಮಾ ಮೂಲಕ ಚಂದನವನಕ್ಕೆ ನಿರ್ಮಾಪಕನಾಗಿ ಪಾದಾರ್ಪಣೆ ಮಾಡುತಿದ್ದಾರೆ. ಓಬಿರಾಯನಿಗೆ ವಿನಯ್ ಶಾಸ್ತ್ರೀ ಅವರೇ ಕಥೆ ಬರೆದಿದ್ದು, ಯಾವುದೇ ರಿಮೇಕ್, ಕದ್ದಿರೋದು ಅಲ್ವೇ ಅಲ್ಲ ಅನ್ನುತ್ತಾರೆ ನಿರ್ದೇಶಕರು.ಮಜ ಮಜವಾದ ಲವ್, ಸೆಂಟಿಮೆಂಟ್, ಕಾಮಿಡಿ ಮೂಲಕ ರಂಜಿಸೋ ಚಿತ್ರಕಥೆ ಹೊಂದಿದ್ದು, ಸಿನಿಮಾ ತಂಡ ಚಿತ್ರೀಕರಣಕ್ಕೆ ಹೊರಡಲು ರೆಡಿಯಾಗಿ ನಿಂತಿದೆ.

ರಾಜೇಶ್ ನಟರಂಗ್, ದತ್ತಣ್ಣ, ಚೈತ್ರ ಆಚಾರ್ ಹೀಗೆ ಪ್ರತಿಭಾನ್ವಿತ ನಟ ನಟಿಯರ ಆಯ್ಕೆಯಾಗಿದ್ದು, ಫೀಮೇಲ್ ಲೀಡ್ ಆಯ್ಕೆ ಫೈನಲ್ ಆಗಬೇಕಷ್ಟೆ. ಇನ್ನೊಂದು ಈ ಸಿನಿಮಾದಲ್ಲಿ ವಿಶೇಷವಾದದ್ದು ಅಂದರೆ ರಘು ದಿಕ್ಷಿತ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವುದಲ್ಲದೇ ಸಿನಿಮಾ ಪೂರ್ತಿ ಹಲವಾರು ತಿರುವುಗಳಿಗೆ ಕಾರಣವಾಗುವ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಹಿಂದೆ ಗರುಡ ಸಿನಿಮಾದಲ್ಲೂ ಒಂದು ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರಧಾರಿಯಾಗಿ ಮಿಂಚಲಿದ್ದು, ರಘುದಿಕ್ಷಿತ್ ಅವರನ್ನ ಹೊಸ ರೂಪದಲ್ಲಿ ನೋಡಬಹುದು.

ಅನ್ನೂರ್ ಪ್ರೊಡಕ್ಷನ್ ಮತ್ತು ಮೋದಕ್ ಸ್ಟುಡಿಯೋಸ್ ನಿರ್ಮಾಣದ ಈ ಸಿನಿಮಾಕ್ಕೆ ಸುನೀತ್ ಹಲಗೇರಿ ಕ್ಯಾಮೆರಾ ಕೈಚಳಕ ತೋರಿಸಲಿದ್ದು, ವೇಣು ಹೆಸ್ರಳ್ಳಿ ಸಂಭಾಷಣೆ ಬರೆಯಲಿದ್ದಾರೆ. ಈ ಮೊದಲು ವೇಣು ಅವರು ಕಪಟ ನಾಟಕ ಪಾತ್ರಧಾರಿ ಚಿತ್ರ ಸೂಪರ್ ಹಿಟ್ ಹಾಡು “ಯಾಕೆ ಅಂತ ಗೊತ್ತಿಲ್ಲ ಕಣ್ರೀ” ಹಾಡಿಗೆ ಸಾಹಿತ್ಯ ಬರೆದು, ಹಾಗೇನೆ ನಿರ್ದೇಶಕರ ಜೊತೆ ಸೇರಿ ಡೈಲಾಗ್ಸ್ ಸಹ ಬರೆದಿದ್ದರು. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಅವರ ಹುಟ್ಟು ಹಬ್ಬದ ಶುಭಾಶಯಗಳು ಸಿನಿಮಾಕ್ಕೆ ಡೈಲಾಗ್ಸ್, ದಿಗಂತ್ ಐಂದ್ರಿತಾ ನಟನೆಯ ಇನ್ನೂ ಹೆಸರಿಡದ ಸಿನಿಮಾಕ್ಕೆ ಚಿತ್ರಕಥೆ ಸಂಭಾಷಣೆ, ಡಾಲಿ ಸಿನಿಮಾದಲ್ಲಿ ರೈಟಿಂಗ್ ಡಿಪಾರ್ಮೆಂಟ್ ನಲ್ಲಿ ಕೆಲ್ಸ ಮಾಡಿ ಇದೆಲ್ಲಾ ಆದ ನಂತರ ಇವಾಗ ಈ ಓಬೆರಾಯನಿಗೆ ಡೈಲಾಗ್ಸ್ ಬರೆಯುತಿದ್ದಾರೆ. ಅಂದುಕೊಂಡಂತೆ ಆದರೆ ಏಪ್ರಿಲ್ ನಲ್ಲಿ ಚಿತ್ರೀಕರಣಕ್ಕೆ ಹೊರಡುತ್ತಿರೋ ಈ ತಂಡಕ್ಕೆ ನಮ್ ಕಡೆಯಿಂದ ಶುಭಾಶಯ ಮತ್ತು ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ಸಿನಿಮಾ ಕೊಡಲಿ ಎಂಬುದೇ ನಮ್ ಆಶಯ.