ಬೆಂಗಳೂರು : ಯಾವುದೇ ವ್ಯಕ್ತಿಯಾದರೂ ಸಾವಿನ ಬಳಿಕ ಸಾಮಾನ್ಯವಾಗಿ ಜನರು ಆತನ ಸಾಧನೆಗಳನ್ನು ಮರೆತು ಬಿಡ್ತಾರೆ. ಆದರೆ ಕರುನಾಡಿನ ರಾಜ್ ಕುಮಾರ್ ಪುನೀತ್ ( Puneeth Rajkumar) ಮಾತ್ರ, ಸಾವಿನ ಬಳಿಕ ಹಿಂದೆಂದಿಗಿಂತಲೂ ಹೆಚ್ಚು ಜನರಿಗೆ ಹತ್ತಿರವಾಗಿದ್ದಾರೆ. ಪುನೀತ್ ಸಾವಿನ ಬಳಿಕ ತೆರೆದುಕೊಂಡ ಅವರ ಮಾನವೀಯ ಮುಖ ಅಪ್ಪು ಎಂತಹ ಸಾಧಕ ಎಂಬುದನ್ನು ಜಗತ್ತಿಗೆ ತೋರಿಸಿದೆ. ಹೀಗಾಗಿ ಈಗ ಪುನೀತ್ ಬದುಕು ಮಕ್ಕಳಿಗೆ ಪಠ್ಯವಾಗಲಿ ಎಂಬ ಆಗ್ರಹ ಎಲ್ಲೆಡೆಯಿಂದ ವ್ಯಕ್ತವಾಗುತ್ತಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರು ಅಜರಾಮರವಾಗಿಸಲು ಹಾಗೂ ಅವರ ಸಾಧನೆಗಳನ್ನು ಬದುಕಿನ ರೀತಿಯನ್ನು ಮಕ್ಕಳಿಗೆ ಆದರ್ಶವಾಗುವಂತೆ ಮಾಡಲು ಪ್ರಾಥಮಿಕ ಶಾಲಾಶಿಕ್ಷಣದಲ್ಲಿ ಅಪ್ಪು ಪಠ್ಯ ಸೇರ್ಪಡೆಯಾಗಲಿ ಎಂಬ ಒತ್ತಡ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಪ್ರಾಥಮಿಕ ಶಾಲಾ ಶಿಕ್ಷಣದ ಪಠ್ಯದಲ್ಲಿ ಅಪ್ಪು ಅಧ್ಯಾಯ ಸೇರ್ಪಡೆಗೆ ಒತ್ತಾಯ ವ್ಯಕ್ತ ವಾಗಿದ್ದು, ಪುನೀತ್ ಜೀವನಗಾಥೆಯನ್ನು ಪಠ್ಯ ಕ್ರಮದಲ್ಲಿ ಅಳವಡಿಸಲು ಪಾಲಿಕೆಗೆ ಹಲವಾರು ಸಂಘಸಂಸ್ಥೆಗಳು ಒತ್ತಾಯಿಸಿವೆ.

ಬಿಬಿಎಂಪಿ ವ್ಯಾಪ್ತಿಯ ಶಾಲೆ ಸೇರಿದಂತೆ ರಾಜ್ಯದ ಎಲ್ಲಾ ಶಾಲೆಗಳ ಪಠ್ಯದಲ್ಲಿ ದೊಡ್ಮನೆ ಹುಡುಗನ ಆದರ್ಶದ ಬದುಕು ಪಾಠವಾಗಲಿ ಎಂದು ಬಿಬಿಎಂಪಿ ಶಿಕ್ಷಣ ವಿಭಾಗಕ್ಕೆ ಹಲವು ಸಂಘ ಸಂಸ್ಥೆಗಳಿಂದ ಬೇಡಿಕೆ ಸಲ್ಲಿಕೆಯಾಗಿದೆ. ಅಪ್ಪು ಬದುಕನ್ನು ಪಾಠವಾಗಿ ಅಳವಡಿಸಲು ಒತ್ತಡ ವ್ಯಕ್ತವಾಗಿರುವ ಸಂಗತಿಯನ್ನು ಸಂಘ ಸಂಸ್ಥೆಗಳ ಹೆಸರಿನೊಂದಿಗೆ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಗಮನಕ್ಕೆ ತರಲು ಬಿಬಿಎಂಪಿ ಶಿಕ್ಷಣ ವಿಭಾಗ ಮುಂದಾಗಿದೆ.

ಯುವರತ್ನನ (Puneeth Rajkumar ) ಯಶೋಗಾಥೆ ಕೇಳಲಿದ್ದಾರೆ ಮಕ್ಕಳು
4 ಅಥವಾ 5ನೇ ತರಗತಿಯ ಮಕ್ಕಳ ಪಠ್ಯದಲ್ಲಿ ಯುವರತ್ನನ ಯಶೋಗಾಥೆ ಅಳವಡಿಸಲು ಚಿಂತನೆ ನಡೆದಿದೆ ಎನ್ನಲಾಗಿದ್ದು, ಪುನೀತ್ ಅಭಿಮಾನಿಗಳು ಈ ಸಂಗತಿ ತಿಳಿದು ಸಂಭ್ರಮಿಸುತ್ತಿದ್ದಾರೆ. ಪುನೀತ್, 26 ಅನಾಥ ಆಶ್ರಮ, 19 ಗೋ ಶಾಲೆಗಳು, 16 ವೃದ್ಧಾಶ್ರಮಗಳು, 4,800ಕ್ಕೂ ಹೆಚ್ಚಿನ ಬಡ ವಿದ್ಯಾರ್ಥಿಗಳ ಓದಿನ ವೆಚ್ಚವನ್ನು ಪುನೀತ್ ಭರಿಸುತ್ತಿದ್ದರು.

ಈ ನಿಟ್ಟಿನಲ್ಲಿ ಸಾರ್ವಜನಿಕ ರಂಗದಿಂದ ಕರ್ನಾಟಕ ರತ್ನ ಡಾ ಪುನೀತ್ ರಾಜ್ ಕುಮಾರ್ ಬದುಕನ್ನು ಪಠ್ಯವಾಗಿಸಬೇಕೆಂದು ಪುನೀತ್ ರಾಜ್ ಕುಮಾರ್ ಅಭಿಮಾನಿ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಎನ್ .ಆರ್.ರಮೇಶ್ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಈ ಕುರಿತು ಅವರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗೆ ಪತ್ರ ಕೂಡ ಬರೆದಿದ್ದಾರೆ. ಇನ್ನು ಈ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಮಾತನಾಡಿದ್ದು,ಈ ಬಗ್ಗೆ ಬೇಡಿಕೆ ಕೇಳಿ ಬಂದಿದೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಪುನೀತ್ ಹೆಸರನ್ನು ಅಮರವಾಗಿಸುವ ನೊರೆಂಟು ಪ್ರಯತ್ನಗಳು ನಡೆದಿದ್ದು ಮಕ್ಕಳು ಪುನೀತ್ ರಾಜಕುಮಾರ್ ಬದುಕಿನ ರೀತಿಯನ್ನು ತಮ್ಮೊಳಗು ಅಳವಡಿಸಿಕೊಂಡು ಮಾದರಿಯಾಗಬೇಕಿದೆ.
ಇದನ್ನೂ ಓದಿ : ಅಪ್ಪುಗೆ ರಾಜ್ಯ ಸರ್ಕಾರದ ಗೌರವ : ಸದ್ಯದಲ್ಲೇ ಘೋಷಣೆಯಾಗಲಿದ್ಯಾ ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯ್ತಿ
ಇದನ್ನೂ ಓದಿ : ಸಿನಿಮಾ ಹೇಗಿತ್ತು ಅಂತ ಕೇಳೋಕೆ ಪುನೀತ್ ಪೋನ್ ಮಾಡಲ್ಲ: ಭಾವುಕರಾದ ಶಿವಣ್ಣ
( Puneeth Rajkumar life history to school text)