ಬಾಲಿವುಡ್ ನಲ್ಲಿ ಅದೆಷ್ಟೋ ಸ್ಪೆಷಲ್ ಜೋಡಿಗಳಿದ್ದಾರೆ. ಆದ್ರೆ ಅವರಲ್ಲಿ ಕೆಲವರು ಮಾತ್ರ ಈಗಲೂ ಟ್ರೆಂಡ್ ನಲ್ಲಿದ್ದಾರೆ. ಅಂಥವರಲ್ಲಿ ಫೇಮಸ್ ಕಪಲ್, ಲವ್ಲಿ ಜೋಡಿ ಅಂತಲೇ ಹೆಸರು ಮಾಡಿದವರು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ. ಈ ಜೋಡಿಗಿಂದು ಸ್ಪೆಷಲ್ ದಿನ.

ಹೌದು, ಕಪಲ್ ತಮ್ಮ ಎರಡನೆ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭ ವನ್ನು ವಿಶೇಷವಾಗಿಸಲು ರಣವೀರ್ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಅಪರೂಪದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿರುವ ರಣವೀರ್ ಸಿಂಗ್ ‘ಆತ್ಮಗಳು ಶಾಶ್ವತವಾಗಿ ಹೆಣೆದುಕೊಂಡಿವೆ. ಎರಡನೇ ವಾರ್ಷಿಕೋತ್ಸವದ ಶುಭಾಶಯಗಳು, ದೀಪಿಕಾಪಡುಕೋಣೆ ‘ ಎಂದು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ.
ರಣವೀರ್ ಮತ್ತು ದೀಪಿಕಾ ಪಡುಕೋಣೆ ಜೋಡಿ 2018ರಲ್ಲಿ ಇಟಲಿಯ ಲೇಕ್ ಕೊಮೊದಲ್ಲಿ ನಡೆದ ಸಮಾರಂಭದಲ್ಲಿ ವಿವಾಹವಾದರು.

ಅದ್ಧೂರಿಯಾಗಿ ನಡೆದ ಈ ವಿವಾಹ ಸಮಾರಂಭದಲ್ಲಿ ಕೊಂಕಣಿ ಮೂಲದ ದೀಪಿಕಾ ಮತ್ತು ಸಿಂಧಿ ಮೂಲದ ರಣವೀರ್ ಎರಡೂ ಸಂಪ್ರದಾಯಗಳ ಪ್ರಕಾರ ಮದುವೆಯಾದರು. ಈ ಶುಭ ಸಂದರ್ಭದಲ್ಲಿ ಅವರ ಆಪ್ತರು ಮತ್ತು ಕುಟುಂಬಸ್ಥರು ಭಾಗವಹಿಸಿದ್ದರು.
ಇನ್ನು ನವೆಂಬರ್ 21ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಅದ್ಧೂರಿ ಆರತಕ್ಷತೆ ನೆರವೇರಿತ್ತು.

ಒಟ್ಟಿನಲ್ಲಿ ಇಂದು ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಈ ಜೋಡಿಗೆ ಎಲ್ಲರೂ ಶುಭ ಕೋರಿ ಹಾರೈಸಿದ್ದಾರೆ.