ಕನ್ನಡದ ಮೇರುನಟಿ, ಬಹುಭಾಷಾ ಕಲಾವಿದೆ, ರಾಜ್ಯಪ್ರಶಸ್ತಿ ವಿಜೇತ ನಟಿ ಜಯಂತಿ ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ್ದಾರೆ. ಹಲವು ಭಾಷೆಗಳಲ್ಲಿ, ಮೇರುನಟರ ಜೊತೆ ಸರಿಸಮಾನವಾಗಿ ನಟಿಸಿ ಅಭಿನಯ ಶಾರದೆ ಎನ್ನಿಸಿಕೊಂಡಿದ್ದ ಜಯಂತಿಗೆ ಅದೊಂದು ಸಂಗತಿ ಸದಾ ಭಯ ಹುಟ್ಟಿಸುತ್ತಿತ್ತು. ನೋವು ಬಹುವಾಗಿ ಕಾಡುತ್ತಿತ್ತು.

ಹೌದು ನಟಿ ಜಯಂತಿ ನಟನೆಯಲ್ಲಿದ್ದು, ಚಿತ್ರರಂಗದಲ್ಲಿ 500 ಕ್ಕೂ ಹೆಚ್ಚು ಸಿನಿಮಾದಲ್ಲಿ ಮಿಂಚಿದ್ದರೂ ಸಾವು ಎಂಬ ಸಂಗತಿ ಅವರನ್ನು ಬಹುವಾಗಿ ಭಯಪಡಿಸುತ್ತಿತ್ತು. ಸಾವಿನ ಸುದ್ದಿ, ಸಾವಿನ ಮನೆ ಹಾಗೂ ಸತ್ತವರ ದರ್ಶನಕ್ಕೆ ಜಯಂತಿ ಬಹುವಾಗಿ ಹೆದರುತ್ತಿದ್ದರು.

ಯಾರಾದ್ರೂ ನಿಧನವಾದ ಸುದ್ದಿ ತಿಳಿದರೂ ಜಯಂತಿ ನೋಡಲು ಹೋಗುತ್ತಿರಲಿಲ್ಲ. ಇದನ್ನು ಹಲವರು ಜಯಂತಿಯ ಅಹಂಕಾರ ಎಂದು ಅರ್ಥೈಸಿಕೊಂಡಿದ್ದಿದೆಯಂತೆ. ಆದರೆ ಅಸಲಿ ಕಾರಣ ಎಂದರೇ ಜಯಂತಿಗೆ ಸಾವನ್ನು ನೋಡಲಾಗುತ್ತಿರಲಿಲ್ಲ. ಯಾರನ್ನೂ ನೋಡಿ ಬಂದರೇ ವಾರಗಟ್ಟಲೇ ಅದೇ ಭಯ ಕಾಡುತ್ತಿತ್ತಂತೆ.

ಇದೇ ಕಾರಣಕ್ಕೆ ಅವರು ಯಾರಾದ್ರೂ ನಿಧನರಾದ ಸುದ್ದಿ ತಿಳಿದರೂ ನೋಡಲು ಹೋಗುತ್ತಿರಲಿಲ್ಲವಂತೆ. ಅವರ ಆತ್ಮೀಯ ಸ್ನೇಹಿತೆ ಕಲ್ಪನಾ ನಿಧನರಾದಾಗ ನೋಡಲು ಹೋಗಿ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ. ಜಯಂತಿ ಸ್ಥಿತಿ ನೋಡಿದ ಅಬ್ಬಾಯಿ ನಾಯ್ಡು, ಜಯಂತಿಯನ್ನು ಯಾರಾದ್ರೂ ಮನೆಗೆ ಸೇರಿಸಿ, ಇಲ್ಲವಾದರೇ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ ಎಂದಿದ್ದರಂತೆ.

ಪುಟ್ಟಣ ಕಣಗಾಲ್, ಡಾ.ರಾಜ್ ಸೇರಿದಂತೆ ಹಲವು ಆತ್ಮೀಯರು ನಿಧನರಾದಾಗಲೂ ಜಯಂತಿ ಬಹುವಾಗಿ ನೊಂದುಕೊಂಡಿದ್ದಲ್ಲದೇ ಹಲವು ದಿನಗಳ ಕಾಲ ನೋವಿನಲ್ಲಿ ಒದ್ದಾಡಿದ್ದರಂತೆ. ಚಕ್ರತೀರ್ಥ ಸಿನಿಮಾದಲ್ಲಿ ಪತಿಯ ಸಾವಿನ ದೃಶ್ಯದಲ್ಲಿ ಪತ್ನಿಯಾಗಿ ಅಭಿನಯಿಸುತ್ತ ಅತಿಯಾಗಿ ತೀಡಿ ಅಸ್ವಸ್ಥರಾಗಿದ್ದರಂತೆ ಜಯಂತಿ.

ಅಷ್ಟೇ ಅಲ್ಲ ಆಗಾಗ ತಮ್ಮ ಆತ್ಮೀಯರ ಬಳಿ ಸಾವಿನ ಬಗ್ಗೆ ಚರ್ಚೆ ಮಾಡುತ್ತಿದ್ದರಂತೆ. ಹೀಗೆ ಸಾವಿಗೆ ಸದಾ ಹೆದರುತ್ತಿದ್ದ ಜಯಂತಿ, ಕಳೆದ ವರ್ಷ 45 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವಿನ ಜೊತೆ ಹೋರಾಡಿ ಗೆದ್ದುಬಂದಿದ್ದರು.
ಕೊನೆಗೂ ಜಯಂತಿಯವರನ್ನು ಸದಾ ಹೆದರಿಸುತ್ತಿದ್ದ ಸಾವು ಅವರನ್ನು ಗೆದ್ದಿದೆ. ಅದರೆ ನಿದ್ದೆಯಲ್ಲೇ ಜಯಂತಿ ಚಿರನಿದ್ರೆಗೆ ಜಾರುವ ಮೂಲಕ ಸದಾ ಸ್ಮರಿಸಬಲ್ಲ ನೆನಪುಗಳನ್ನು ಚಿತ್ರರಸಿಕರಿಗೆ ಉಣಿಸಿಹೋಗಿದ್ದಾರೆ.