ಸಿಎಂ ಬಿಎಸ್ವೈ ರಾಜೀನಾಮೆ….! ಕಮಲ ಪಾಳಯದ ಕರಾಮತ್ತಿನ ಅಸಲಿ ಕಾರಣ ಇಲ್ಲಿದೆ…!!

ಮತ್ತೊಮ್ಮೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಿಎಂ ಬಿಎಸ್ವೈ ಅವಧಿ ಮುಗಿಸದೇ ಕೆಳಕ್ಕಿಳಿಯುವ ದುರಂತ ನಾಯಕರಾಗಿಯೇ ರಾಜಕೀಯದ ಇತಿಹಾಸದಲ್ಲಿ ಉಳಿದು ಹೋದಂತಾಗಿದೆ. ಆದರೆ ಅತ್ಯಂತ ನಾಜೂಕಾಗಿ ಸಿಎಂ ಬಿಎಸ್ವೈರನ್ನು ಕೆಳಕ್ಕಿಳಿಸಿದ ಬಿಜೆಪಿ ಸಧ್ಯ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಇಷ್ಟಕ್ಕೂ ಸಿಎಂ ಬಿಎಸ್ವೈ ಕೆಳಕ್ಕಿಳಿಯೋಕೆ ಕಾರಣವಾಗಿದ್ದೇನು ಅನ್ನೋದನ್ನು ನೋಡಿದ್ರೆ ಹಲವು ಕಾರಣಗಳು ಕಣ್ಣಿಗೆ ಕಟ್ಟುವಂತೆ ಕಾಣಸಿಗುತ್ತವೆ.

ಬಿಎಸ್ವೈ ಪ್ರತಿಭಾಷಣದಲ್ಲೂ ಹೇಳಿಕೊಳ್ಳುವಂತೆ ಸೈಕಲ್ ಮೇಲೆ ಸುತ್ತಾಡಿ ಪಕ್ಷ ಕಟ್ಟಿದವರು  ಬಿಎಸ್ವೈ. ಅದಕ್ಕೆ ತಕ್ಕನಾಗಿ ಪಕ್ಷದಲ್ಲಿ ವಿವಿಧ ಹುದ್ದೆ, ಅಧಿಕಾರವನ್ನು ಅನುಭವಿಸುವಲ್ಲಿ ಬಿಎಸ್ವೈ ಎಂದು ಹಿಂದೆ ಬಿದ್ದಿಲ್ಲ.

ಆದರೆ ಈ ಭಾರಿ ಶತಾಯ ಗತಾಯ ಸರ್ಕಸ್ ಮಾಡಿ ಅಧಿಕಾರ ಗಿಟ್ಟಿಸಿದ ಸಿಎಂ ಬಿಎಸ್ವೈ ಕೆಳಗೆ ಇಳಿಯೋದಿಕ್ಕೆ ಮುಖ್ಯವಾಗಿ 5 ಕಾರಣಗಳನ್ನು ಪಟ್ಟಿ ಮಾಡಬಹುದು.

  • 1 ಭ್ರಷ್ಟಾಚಾರದ ಆರೋಪ.

ನಾ ಕಾಯೇಂಗೆ, ನಾ ಖಾನೇ ದೆಂಗೇ ಎನ್ನುತ್ತಲೇ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಜುಗರ ತರುವಷ್ಟು ಭ್ರಷ್ಟಾಚಾರದ ಆರೋಪ ಸಿಎಂ ಹಾಗೂ ಕುಟುಂಬದ ಮೇಲೆ ಕೇಳಿಬಂತು. ಅಷ್ಟೇ ಅಲ್ಲ ಆಡಳಿತದಲ್ಲಿ ಪುತ್ರ ವಿಜಯೇಂದ್ರ್, ಪುತ್ರಿ,ಅಳಿಯ,ಮೊಮ್ಮಗ ಹೀಗೆ ಎಲ್ಲರೂ ಹಸ್ತಕ್ಷೇಪ ಮಾಡಿ ಅಪಾರ ಪ್ರಮಾಣದ ಹಣಗಳಿಕೆಗೆ ಮುಂದಾಗಿದ್ದು, ಪಕ್ಷದ ಇಮೇಜ್ ಕಾಪಾಡುವ ಕಾರಣಕ್ಕೆ ಬಿಎಸ್ವೈ ಇಳಿಸುವುದು ಹೈಕಮಾಂಡ್ ಗೆ ಅನಿವಾರ್ಯವಾಯಿತು.

  • 2.ಯಡಿಯೂರಪ್ಪನವರ ಬೆಳವಣಿಗೆ ಹಾಗೂ ಕುಟುಂಬ ರಾಜಕಾರಣ

ಬಿಜೆಪಿಯಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದ ಬಿಎಸ್ವೈ ಪ್ರಶ್ನಾತೀತ ನಾಯಕರಾಗಿ ಬೆಳೆದುನಿಂತಿದ್ದರು. ಜೊತೆಗೆ ಇಬ್ಬರೂ ಪುತ್ರರನ್ನು ರಾಜಕಾರಣಕ್ಕೆ ತಂದು, ಸಕ್ರಿಯ ಚುನಾವಣಾ ರಾಜಕಾರಣದಲ್ಲೂ ತೊಡಗಿಸಿ ತಮ್ಮ ಬಳಿಕ ನಾಯಕತ್ವಕ್ಕೆ ಬೇಡಿಕೆ ಇಡುವಷ್ಟು ಸಬಲರಾಗಿ ಬೆಳೆಸಿದ್ದರು. ಇದು ಬಿಜೆಪಿಯ ತತ್ವಾದರ್ಶಗಳಿಗೆ ಎಲ್ಲೋ ಒಂದು ಕಡೆ ಮಗ್ಗುಲ ಮುಳ್ಳಾಗುವ ಮುನ್ಸೂಚನೆ ನೀಡಿತ್ತು. ಕರ್ನಾಟಕದ ಬಿಜೆಪಿಯನ್ನು ಬಿಎಸ್ವೈ ತಮ್ಮ ಹಿಡಿತದಲ್ಲೇ ಇಟ್ಟುಕೊಂಡಿದ್ದರು. ರಾಷ್ಟ್ರ ನಾಯಕರ ಸಲಹೆ-ಸೂಚನೆ,ನಿರ್ಧಾರಗಳ ಮೇಲೂ ಪ್ರಭಾವ ಬೀರುವಷ್ಟರ ಮಟ್ಟಿಗೆ ಕರ್ನಾಟಕದ ಬಿಜೆಪಿ ಬಿಎಸ್ವೈ ಕೈಯಲ್ಲಿತ್ತು. ಇದು ಮುಂದೊಂದು ದಿನ ಪಕ್ಷಕ್ಕೆ ಹಾಗೂ ಹೈಕಮಾಂಡ್ ಗೆ ಉಂಟು ಮಾಡಬಹುದಾದ ನಷ್ಟದ ಅಂದಾಜು ಹಾಕಿದ ಹೈಕಮಾಂಡ್ ಬಿಎಸ್ವೈ ಹಿಡಿತದಿಂದ ರಾಜ್ಯ ಬಿಜೆಪಿ ಕಾಪಾಡಲು ಸಿಎಂ ಸ್ಥಾನದಿಂದ ಗೌರವಯುತ ವಿದಾಯ ಕೋರುವ ನಿರ್ಧಾರಕ್ಕೆ ಬಂದಿದೆ.

  • 3.ಬಿಎಸ್ವೈ ಪರ್ಯಾಯನಾಯಕತ್ವದ ಅಗತ್ಯ

ಹಿಂದೊಮ್ಮೆ ಬಿಎಸ್ವೈರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಹೈಕಮಾಂಡ್ ಗೆ ಯಡಿಯೂರಪ್ಪ ನೀಡಿದ ಉತ್ತರ ಬಿಜೆಪಿಯ ಅಸ್ತಿತ್ವವನ್ನೇ ಅಲುಗಾಡಿಸಿತ್ತು. ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ಬಿಎಸ್ವೈ 2013 ರಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣವಾಗಿದ್ದನ್ನು ಬಿಜೆಪಿ ಹಾಗೂ ಆರ್.ಎಸ್.ಎಸ್. ನಾಯಕರು ಮರೆತಿಲ್ಲ.ಒಂದು ಹಂತದಲ್ಲಿ ರಾಜ್ಯ ಬಿಜೆಪಿಯಲ್ಲಿ ಬಿಎಸ್ವೈಗೆ ಪರ್ಯಾಯವಾದ ನಾಯಕತ್ವವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇದು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಕ್ಕೆ ಅನುಕೂಲಕರ ಬೆಳವಣಿಗೆಯಲ್ಲ. ಹೀಗಾಗಿ ಮುಂದಿನ ಚುನಾವಣೆ ವೇಳೆಗೆ ರಾಜ್ಯಕ್ಕೊಂದು ಯುವನಾಯಕತ್ವ ಹಾಗೂ ಬಿಎಸ್ವೈಗೆ ಪರ್ಯಾಯ ನಾಯಕರನ್ನು ಬೆಳೆಸುವ ದೂರದೃಷ್ಟಿಯಿಂದ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಂದ ಗೌರವ ವಿದಾಯ ಕೋರಿಸಿಕೊಂಡಿದೆ ಎಂಬುದು ಗಮನಿಸಬೇಕಾದ ಸಂಗತಿ.

  • 4.ಜಾತಿ ಆಧಾರಿತ ರಾಜಕಾರಣಕ್ಕೆ ಮುಕ್ತಿ

ಕರ್ನಾಟಕ ಬಿಜೆಪಿ ಎಂದರೇ ಲಿಂಗಾಯತರು ಎಂಬ ಮನೋಭಾವಕ್ಕೆ ಕಾರಣವಾಗಿದ್ದು ರಾಜ್ಯದಲ್ಲಿ ಬಿಜೆಪಿ ಸಿಎಂ ಸ್ಥಾನ. ಬಹುತೇಕ ನಾಲ್ಕು ಭಾರಿ ಸಿಎಂ ಆಗಿ ಯಡಿಯೂರಪ್ಪ ಆಯ್ಕೆಯಾಗಿದ್ದಾರೆ. ಇದಲ್ಲದೇ ಶೆಟ್ಟರ್ ಕೂಡ ಸಿಎಂ ಸ್ಥಾನದ ಅಧಿಕಾರ ಅನುಭವಿಸಿದ್ದಾರೆ. ಇದು ಬಿಜೆಪಿಯ ಹೈಕಮಾಂಡ್ ಗೆ ರಾಷ್ಟ್ರ ಮಟ್ಟದಲ್ಲಿ ಮುಜುಗರ ತರುವ ವಿಚಾರ. ಜಾತಿ ಆಧಾರಿತ ರಾಜಕಾರಣದಿಂದ ಪಕ್ಷವನ್ನು ಮುಕ್ತಗೊಳಿಸಿ ಸಾಮರ್ಥ್ಯ ಆಧಾರಿತವಾಗಿ ಯುವ ಮುಖಗಳಿಗೆ ಮನ್ನಣೆ ನೀಡುವ ಚಿಂತನೆಯಲ್ಲಿದೆ ಬಿಜೆಪಿ. ಹೀಗಾಗಿ ಬಿಎಸ್ವೈ ವಯಸ್ಸನ್ನು ಕಾರಣವಾಗಿಟ್ಟುಕೊಂಡು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸಿ ಜಾತಿ ಮಾನದಂಡದಿಂದ ಹೊರಬಂದು ಯಾರೂ ಊಹಿಸದವರನ್ನು ಸಿಎಂ ಸ್ಥಾನಕ್ಕೇರಿಸಿ ಪಕ್ಷದ ಇಮೇಜ್ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರ ಬಿಜೆಪಿಗಿದೆ.

  • 5. ಬಿಎಸ್ವೈ ವಯಸ್ಸು

2014 ರಲ್ಲಿ ಚುನಾವಣೆಗೆ ಪ್ರಣಾಳಿಕೆ ಸಿದ್ಧ ಪಡಿಸುವ ವೇಳೆಗೆ ಯುವಮುಖಗಳಿಗೆ ಆದ್ಯತೆ ನೀಡುವುದಾಗಿ ಘೋಷಿಸಿದ ಬಿಜೆಪಿ ರಾಷ್ಟ್ರೀಯ ನಾಯಕರು ಬಿಜೆಪಿಯಲ್ಲಿ 75 ವರ್ಷ ಮೀರಿದವರಿಗೆ ಯಾವುದೇ ಜವಾಬ್ದಾರಿ ನೀಡಲಾಗುವುದಿಲ್ಲ. ಹಾಗೂ ಚುನಾವಣೆಗೆ ಸ್ಪರ್ಧಿಸಲು ಅವಕಾಶವನ್ನು ನೀಡುವುದಿಲ್ಲ ಎಂಬ ಅಲಿಖಿತ ನಿಯಮವನ್ನು ಜಾರಿಗೆ ತಂದರು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಕೇಂದ್ರದಲ್ಲಿ ಅಡ್ವಾಣಿ, ಮುರುಳಿ ಮನೋಹರ ಜೋಷಿಯಂತಹ ನಾಯಕರನ್ನು  ಕಡೆಗಣಿಸಿದ ಬಿಜೆಪಿ ರಾಜ್ಯದಲ್ಲೂ ಇದೇ ತಂತ್ರ  ಆಧರಿಸಿ ಬಿಎಸ್ವೈರನ್ನು ಅಧಿಕಾರದಿಂದ ತಾವಾಗಿಯೇ ದೂರ ಸರಿಯುವಂತೆ ಮಾಡಿದೆ.

ಆದರೆ ಇಷ್ಟೇಲ್ಲ ಚಾಣಾಕ್ಷತನದಿಂದ ಬಿಎಸ್ವೈರನ್ನು ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿಗೆ ಮುಂದಿನ ದಿನಗಳಲ್ಲಿ ಸಾಕಷ್ಟು ಸವಾಲುಗಳು ಕಾದಿದ್ದು, ಬಿಎಸ್ವೈ ನಾಯಕತ್ವವಿಲ್ಲದ ಬಿಜೆಪಿ ಕರ್ನಾಟಕದಲ್ಲಿ  ಮುಂದಿನ ಚುನಾವಣೆ ಗೆದ್ದು ಬೀಗುವುದು ಸುಲಭವಿಲ್ಲ ಎಂಬ ಸತ್ಯ ಹೈಕಮಾಂಡ್ ಅರಿತುಕೊಳ್ಳಬೇಕಿದೆ.

Comments are closed.