ಬಿಗ್ ಬಾಸ್ ನಲ್ಲಿ ವಿವಾದಗಳಿಂದಲೇ ಹೆಸರು ಗಳಿಸಿದ್ದ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ದೊಡ್ಮನೆಯಿಂದ ಹೊರಬರುತ್ತಿದ್ದಂತೆ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಕ್ರವರ್ತಿ ನಾಯಕರಾಗಿರುವ ಮಧ್ಯಂತರ ಸಿನಿಮಾ ಪೋಸ್ಟರ್ ಸುದೀಪ್ ರಿಲೀಸ್ ಮಾಡಿ ಶುಭಹಾರೈಸಿದ್ದಾರೆ.

ಕ್ರೈಂ ಥ್ರಿಲ್ಲರ್ ಮರ್ಡರ್ ಸ್ಟೋರಿ ಆಧಾರಿತ ಸಿನಿಮಾದಲ್ಲಿ ಚಕ್ರವರ್ತಿ ಚಂದ್ರಚೂಡ್ ನಾಯಕರಾಗಿ ನಟಿಸುತ್ತಿದ್ದು, ವಶಿಷ್ಠ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಮಧ್ಯಂತರ ಸಿನಿಮಾ ಪೋಸ್ಟರ್ ನಲ್ಲಿ ಚಕ್ರವರ್ತಿ ಗನ್ ಹಿಡಿದು ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ಸುದೀಪ್, ಚಕ್ರವರ್ತಿಗೆ ಶುಭಹಾರೈಸಿದ್ದು, ಚಕ್ರವರ್ತಿ ತುಂಬ ಬೋಲ್ಡ್ ಆಗಿ ಮಾತನಾಡುತ್ತಾರೆ. ಅವರಲ್ಲಿರುವ ಪ್ರತಿಭೆ ಬಳಕೆಯಾಗಬೇಕು ಎಂದು ನನಗೆ ಅನ್ನಿಸಿತ್ತು. ಈ ಸಿನಿಮಾದಲ್ಲಿ ನಾಯಕರಾಗುತ್ತಿದ್ದಾರೆ. ಅವರಿಗೆ ಶುಭಕೋರುತ್ತೇನೆ ಎಂದಿದ್ದಾರೆ.

ಕೇವಲ ನಾಯಕರಾಗಿ ಮಾತ್ರವಲ್ಲ ನಿರ್ದೇಶನದಲ್ಲೂ ಚಕ್ರವರ್ತಿ ಚಂದ್ರಚೂಡ್ ತೊಡಗಿಸಿಕೊಂಡಿದ್ದು, ಭೀಮಿ ಎಂಬ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ನ್ನು ಸುದೀಪ್ ರಿಲೀಸ್ ಮಾಡಿದ್ದು, ನಮ್ಮದೇ ಒಂದು ದಿನಕ್ಕೆ ಎರಡು ಸಿನಿಮಾ ಅನೌನ್ಸ್ ಆಗಲ್ಲ ಚಕ್ರವರ್ತಿದು ಆಗ್ತಿದೆ ಎಂದು ಕಾಲೆಳೆದಿದ್ದಾರೆ.

ಶ್ರೀಧರ್ ರಾಮ್ ಎಂಬ ರಂಗಭೂಮಿ ಕಲಾವಿದರು ಭೀಮಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಭೀಮಿ ಸಿನಿಮಾ ವಿಭಿನ್ನ ಕಥೆ ಹೊಂದಿದ್ದು ಮಹಿಳಾ ಸಬಲೀಕರಣದ ಸಂದೇಶ ಸಾರುವ ಚಿತ್ರವಾಗಿದೆ ಎಂದು ಚಂದ್ರಚೂಡ್ ಮಾಹಿತಿ ನೀಡಿದ್ದಾರೆ.