ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ನಿಧನವಾಗಿ 10 ದಿನಗಳೇ ಸಂದಿವೆ. ಆದರೂ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಆಪ್ತರ ಕಣ್ಣೀರು ಬತ್ತಿಲ್ಲ. ಈ ಮಧ್ಯೆ ಪುನೀತ್ ಅಂತ್ಯಸಂಸ್ಕಾರದ ವೇಳೆ ಸರ್ಕಾರದ ಸಹಕಾರಕ್ಕೆ ಅಶ್ವಿನಿ ಪುನೀತ್ ಧನ್ಯವಾದ ಅರ್ಪಿಸಿದ್ದಾರೆ.

ಪತಿಯ ಅಗಲಿಕೆ, ಕುಟುಂಬಸ್ಥರ ನೋವು, ಮಕ್ಕಳ ದುಃಖ ಈ ಎಲ್ಲದರ ನಡುವೆಯೂ ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ತಮ್ಮ ಕರ್ತವ್ಯ ಮರೆತಿಲ್ಲ. ಪುನೀತ್ ನಿಧನದ ವೇಳೆ ಭದ್ರತೆ ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಿದ ಸರ್ಕಾರವನ್ನು ಅಶ್ವಿನಿ ಸ್ಮರಿಸಿದ್ದಾರೆ.

ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಗೆ ಪತ್ರ ಬರೆದಿರುವ ಅಶ್ವಿನಿ ಪುನೀತ್ ರಾಜಕುಮಾರ್, ಶ್ರೀಪುನೀತ್ ರಾಜ್ ಕುಮಾರ್ ನಿಧನ ಎಲ್ಲರಿಗೂ ಆಘಾತ ತಂದ ಸಂಗತಿ. ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದವರು ಪುನೀತ್ ರಾಜ್ ಕುಮಾರ್ .

ನಮ್ಮ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ನಾವು ಅವರನ್ನು ಗೌರವಯುತವಾಗಿ ಕಳುಹಿಸಿಕೊಡಬೇಕಿತ್ತು. ಅಂತ್ಯ ಸಂಸ್ಕಾರಕ್ಕೆ ಎಲ್ಲ ವ್ಯವಸ್ಥೆ ಕಲ್ಪಿಸಿ ,ಭದ್ರತೆ ಒದಗಿಸಿದ್ದಿರಿ, ಪೊಲೀಸ್ ಸಿಬ್ಬಂದಿಯನ್ನು ನೇಮಿಸಿದ್ದಿರಿ. ನಿಮ್ಮ ಈ ಎಲ್ಲ ಸಹಕಾರಕ್ಕ ಧನ್ಯವಾದ ಎಂದು ಅಶ್ವಿನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. .ಜಿಲ್ಲಾಧಿಕಾರಿ ಮಾತ್ರವಲ್ಲದೇ ಗೃಹ ಸಚಿವರು ಹಾಗೂ ಸರ್ಕಾರಕ್ಕೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೃತಜ್ಞತೆ ಅರ್ಪಿಸಿದ್ದಾರೆ.
