Hotel Food Price Hike : ಅಡುಗೆ ಅನಿಲದ ಬಳಿಕ ಈಗ ಆಹಾರದ ಸರದಿ : ಇಂದಿನಿಂದ ಕೈಸುಡಲಿದೆ ಹೊಟೇಲ್ ತಿಂಡಿ

ಕೊರೋನಾ ಸಂಕಷ್ಟ ಹಾಗೂ ಏರುಮುಖವಾಗಿರುವ ತರಕಾರಿ,ದಿನಸಿ,ಅಡುಗೆಅನಿಲ, ಪೆಟ್ರೋಲ್ ಬೆಲೆ ನಡುವೆ ಕಂಗಾಲಾಗಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ನಾಳೆಯಿಂದ ಹೊಟೇಲ್ ಪ್ರಿಯರಿಗೆ ಊಟ ತಿಂಡಿಯೂ ಕೈಸುಡಲಿದೆ.

ಕಳೆದ ಎರಡು ವರ್ಷದಿಂದ ಕರೋನಾ ಕಾರಣಕ್ಕಾಗಿ ಗ್ರಾಹಕರ ಮುಖ ನೋಡಲಾಗದೇ ಕಂಗಾಲಾಗಿದ್ದ ಹೊಟೇಲ್ ಮಾಲೀಕರು ಈಗ ಗ್ರಾಹಕರ ಪುನರಾಗಮನದ ಖುಷಿ ಜೊತೆ ಅವರ ಜೇಬಿಗೆ ಕತ್ತರಿ ಹಾಕಲು ಸಿದ್ಧವಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾರಣ ಮುಂದಿಟ್ಟು ರಾಜ್ಯದಾದ್ಯಂತ ನಾಳೆಯಿಂದ ಹೊಟೇಲ್ ಊಟ,ತಿಂಡಿ ದರ ಏರಿಸುವುದಾಗಿ ಹೊಟೇಲ್ ಮಾಲೀಕರ ಸಂಘ ಘೋಷಿಸಿದೆ.

ಹೊಟೇಲ್ ಊಟ ತಿಂಡಿ ದರದಲ್ಲಿ ಬರೋಬ್ಬರಿ 20 ಶೇಕಡಾದಷ್ಟು ದರ ಏರಿಕೆಯಾಗಲಿದೆ. ಇದರಿಂದ ಒಂದು ಪ್ಲೇಟ್ ಇಡ್ಲಿ- ವಡೆ ದರ 25 ರಿಂದ 30 ರೂಪಾಯಿ ಬದಲಾಗಿ 50 ಕ್ಕೆ ಏರಿಕೆಯಾಗಲಿದೆ.

ಈ ಬಗ್ಗೆ ಮಾಹಿತಿ ನೀಡಿರೋ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್, ದಿನಸಿ, ತರಕಾರಿ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಜೊತೆಗೆ ಹೊಟೇಲ್ ಗಳಲ್ಲಿ ಬಳಸುವ ಕಮರ್ಷಿಯಲ್ ಸಿಲೆಂಡರ್ ದರ ಅಂದಾಜು 2000 ರೂಗೆ ಏರಿಕೆಯಾಗಿದೆ. ಹೀಗಾಗಿ ಹೊಟೇಲ್ ಊಟ ತಿಂಡಿ ದರ ಏರಿಸುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರೋ ಜನಸಾಮಾನ್ಯರು ಇನ್ಮುಂದೆ ಹೊಟೇಲ್ ಮೆಟ್ಟಿಲೆರೋ ಮುನ್ನ ಜೇಬು ಮುಟ್ಟಿ ನೋಡಿಕೊಳ್ಳುವ ಸ್ಥಿತಿ ಎದುರಾಗಿರುವುದು ಸುಳ್ಳಲ್ಲ.

Comments are closed.