ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಒಂದು ವಾರವಷ್ಟೇ ಮಾತ್ರ ಬಾಕಿ ಉಳಿದಿದೆ. ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ. ಈ ನಡುವಲ್ಲೇ ಅಭಿಮಾನಿಗಳು ವಿಶೇಷ ಕಾಮನ್ ಡಿಪಿ (CDP)ಯನ್ನ ಸಿದ್ದಪಡಿಸಿದ್ದಾರೆ. ಅದ್ರಲ್ಲೂ ಕಿಚ್ಚ ಸುದೀಪ್ ಅಡ್ವಾನ್ಸ್ ವಿಶ್ ಮಾಡಿ ಶಿವಣ್ಣ ಅವರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.

ಹೌದು, ಸ್ಯಾಂಡಲ್ ವುಡ್ ನಲ್ಲಿ ವಿಲನ್ ಸಿನಿಮಾ ವೇಳೆ ಹಲವಾರು ರೀತಿಯಲ್ಲಿ ಶಿವಣ್ಣ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ನಡೆದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲಿಂದಲೂ ಇರಸು ಮುರುಸಿನ ಲಕ್ಷಣಗಳೇ ಕಾಣುತಿದ್ದು, ಈ ವರ್ಷ ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ರೆಡಿ ಮಾಡಿರೋ ವಿಶೇಷ ಕಾಮನ್ ಡಿಪಿ (CDP)ಯನ್ನ ಅಭಿನಯ ಚಕ್ರವರ್ತಿ ಬಿಡುಗಡೆ ಮಾಡಿದ್ದು, ಚಂದನವನದಲ್ಲಿ ಹೊಸದೊಂದು ಸಂತಸದ ಅಲೆ ಎದ್ದಂತಾಗಿದೆ.

ಶಿವಸೈನ್ಯ ತಂಡ ರೂಪಿಸಿರೋ ವಿಶೇಷ ಕಾಮನ್ ಡಿಪಿಯನ್ನು ಕಿಚ್ಚ ಸುದೀಪ್ ಅವರು, ಅವರ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ. ಜುಲೈ 12 ಕ್ಕೆ ಶಿವಣ್ಣ 58 ನೇ ವಸಂತಕ್ಕೆ ಕಾಲಿಡುತ್ತಿದ್ದು, ಕಿಚ್ಚ ಸುದೀಪ್ ಜೊತೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸಹ ಬರ್ತ್ ಡೇ ಟ್ವಿಟ್ಟರ್ ಟ್ರೆಂಡ್ ನ ಹ್ಯಾಷ್ ಟ್ಯಾಗ್ ಲಾಂಚ್ ಮಾಡಿರೋದು ಖುಷಿಯ ವಿಚಾರ. ಈ ವರ್ಷದ ಸಂಭ್ರಮಾಚರಣೆಯನ್ನು “ಶಿವಣ್ಣ ಮಹೋತ್ಸವ” ಎಂಬ ಹೆಸರಿನಿಂದ ಆಚರಿಸುತಿದ್ದು, ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಅವರು ಆ ಟೈಟಲ್ ನ್ನ ಲಾಂಚ್ ಮಾಡಿದ್ದರು.

ಶಿವಣ್ಣ ಅವರ ಹುಟ್ಟುಹಬ್ಬ ಈ ವರ್ಷ ಕರೋನಾ ಕಾಟದಿಂದಾಗಿ ಮತ್ತು ಅಭಿಮಾನಿಗಳ ಸುರಕ್ಷತೆಗಾಗಿ ಸ್ವತಃ ಶಿವಣ್ಣ ಅವರೇ ಖುದ್ದಾಗಿ ದಯವಿಟ್ಟು ಮನೆ ಹತ್ರ ಬರಬೇಡಿ, ಆಚರಣೆ ಮಾಡಬೇಡಿ ಎಂಬ ಸಂದೇಶ ರವಾನೆ ಮಾಡಿದ್ದು, ಅಭಿಮಾನಿಗಳ ಮೇಲಿನ ಪ್ರೀತಿಗೆ ಶಿವಣ್ಣ ಅಭಿಮಾನಿಗಳು ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶಿವ ರಾಜ್ಕುಮಾರ್ ಅವರ ಹುಟ್ಟಹಬ್ಬಕ್ಕಾಗಿ ಸಿದ್ಧಪಡಿಸಿದ್ದ ವಿಶೇಷ ಡಿಪಿಯ ಪೋಸ್ಟ್ ಮಾಡುವ ಮೂಲಕ ಅಡ್ವಾನ್ಸ್ ವಿಶ್ ಮಾಡಿದ್ದಾರೆ.