ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ಅವರ ಕಾರು ಅಪಘಾತ ಪ್ರಕರಣ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಒಂದೆಡೆ ಪೊಲೀಸ್ ತನಿಖೆಯ ಜೊತೆಗೆ ವಕೀಲರೊಬ್ಬರು ಪ್ರಕರಣ ಕುರಿತು ಕ್ರಮಕ್ಕೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಶರ್ಮಿಳಾ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ ಕೂಡ ನಟಿ ಶರ್ಮಿಳಾ ಮಾಂಡ್ರೆ ತನ್ನ ಸ್ನೇಹಿತರ ಜೊತೆ ಜಾಲಿ ರೈಡ್ ಹೋಗಿದ್ದು, ನಂತರ ಅವರ ಕಾರು ಅಪಘಾತವಾಗಿತ್ತು.

ಘಟನೆಯ ಬೆನ್ನಲ್ಲೇ ಶರ್ಮಿಳಾ ಮಾಂಡ್ರೆ ಮಾಜಿ ಸಚಿವರ ಪುತ್ರನ ಮನೆಯಲ್ಲಿ ಪಾರ್ಟಿ ಮಾಡಿದ್ದರು ಅನ್ನೋದು ಬಯಲಾಗಿತ್ತು.

ಕಾರು ಅಪಘಾತದ ಹಿನ್ನೆಲೆಯಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ನಟಿ ಹಾಗೂ ಕಾರಿನಲ್ಲಿದ್ದ ಲೊಕೇಶ್ ವಿರುದ್ಧ ದೂರು ದಾಖಲಾಗಿದೆ.

ಒಂದು ಕಡೆ ಪೊಲೀಸರ ವಿಚಾರಣೆ ನಡೆಯುತ್ತಿರೋ ಬೆನ್ನಲ್ಲೇ ಶರ್ಮೀಳಾ ವಿರುದ್ದ ಕ್ರಮಕೈಗೊಳ್ಳುವಂತೆ ವಕೀಲರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ವಕೀಲರಾದ ಗೀತಾ ಮಿಶ್ರಾ ನಟಿ ಶರ್ಮಿಳಾ ಮಾಂಡ್ರೆಯ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ-2005 ಅಡಿ ದೂರು ದಾಖಲಿಸಿಕೊಳ್ಳಲು ನಿರ್ದೇಶನ ನೀಡುವಂತೆ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.

ಶರ್ಮಿಳಾ ಮಾಂಡ್ರೆ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾದ ಬೆನ್ನಲ್ಲೇ ಕಾರಿನಲ್ಲಿ ಎಮರ್ಜೆನ್ಸಿ ಪಾಸ್ ದೊರೆತಿರೋದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿರೋದ್ರ ಜೊತೆ ಪಾಸ್ ದುರ್ಬಳಕೆ ಮಾಡಿಕೊಂಡಿರೋ ಆರೋಪವೂ ಇದೀಗ ನಟಿ ಶರ್ಮಿಳಾ ಮಾಂಡ್ರೆ ಮೇಲಿದೆ.

ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತವಾಗಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 187, 134 ಬಿ, 279, 337ರ ಅಡಿ ಶರ್ಮಿಳಾ ವಿರುದ್ಧ ಪ್ರಕರಣ ದಾಖಲಾಗಿದೆ.

ಇದೀಗ ನ್ಯಾಯಾಲಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲು ಮಾಡಲು ಅನುಮತಿಯನ್ನು ನೀಡಿದ್ರೆ ನಟಿ ಶರ್ಮಿಳಾ ಮಾಂಡ್ರೆ ಸಂಕಷ್ಟಕ್ಕೆ ಸಿಲುಕೋದು ಗ್ಯಾರಂಟಿ.