ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ ತಿಂಗಳುಗಳೇ ಕಳೆದಿದೆ. ಅದೇ ನೋವಲ್ಲಿ ನೊಂದು ಬೆಂದು ಹೋಗಿದ್ದ ಸರ್ಜಾ ಕುಟುಂಬಕ್ಕೆ ಆಶಾಕಿರಣವಾಗಿ ಜ್ಯೂನಿಯರ್ ಚಿರು ಆಗಮನವಾಗಿದೆ. ಪುಟಾಣಿ ಕಂದನಿಗೆ ಲಾಲಿ ಹಾಡುವಾಗಲೂ ಪತಿಯನ್ನು ನೆನೆಸಿಕೊಳ್ಳೋ ಮೂಲಕ ತಮ್ಮ ಹಾಗೂ ಚಿರು ಪ್ರೀತಿಯನ್ನು ಮೇಘನಾ ಶಾಶ್ವತವಾಗಿ ಇಟ್ಟಿದ್ದಾರಂತೆ.

ಚಿರಂಜೀವಿ ಸರ್ಜಾ ನಿಧನವಾದಾಗಲೇ ಸರ್ಜಾ ಕುಟುಂಬ ನೋವಿನಲ್ಲಿ ಮುಳುಗಿ ಹೋಗಿತ್ತು. ಆದರೆ ಆ ನೋವಲ್ಲೇ ಸರ್ಜಾ ಕುಟುಂಬ ಒಂದು ತೀರ್ಮಾನ ಮಾಡಿತ್ತಂತೆ. ಅದು ಮತ್ತೆ ನಮ್ಮ ಮನೆಯಲ್ಲಿ ಇನ್ಮುಂದೆ ಏನೇ ಕಾರ್ಯಕ್ರಮ, ಸಮಾರಂಭ ನಡೆದರೂ ಚಿರು ಉಪಸ್ಥಿತಿ ಇರುವಂತೆ ನೋಡಿಕೊಳ್ಳೋದು. ಇದೇ ಕಾರಣಕ್ಕೆ ಚಿರು ಸರ್ಜಾ ಆಳೆತ್ತರದ ಕಟೌಟ್ ಹಾಗೂ ಪೋಟೋ ಇಟ್ಟು ಮೇಘನಾ ಸೀಮಂತ್ ಕೂಡ ಮಾಡಲಾಗಿತ್ತು.

ಈ ನಿರ್ಧಾರದ ಜೊತೆಗೆ ಜ್ಯೂನಿಯರ್ ಚಿರುಗೆ ತಂದೆಯ ಪ್ರೀತಿ ಹಾಗೂ ಅವರ ಉಪಸ್ಥಿತಿಯ ಫೀಲ್ ಮಾಡಿಸೋದಿಕ್ಕೆ ಮೇಘನಾ ರಾಜ್ ಕೂಡ ಒಂದು ಪುಟ್ಟ ಪ್ರಯತ್ನ ಮಾಡ್ತಿದ್ದು, ಮಗನಿಗೆ ಲಾಲಿ ಹಾಡೋ ಸಮಯದಲ್ಲೆಲ್ಲ ಚಿರು ಚಿತ್ರದ ಹಾಡುಗಳನ್ನೇ ಆಯ್ಕೆ ಮಾಡಿಕೊಳ್ತಿ ದ್ದಾರಂತೆ. ಮಗನನ್ನು ಮಲಗಿಸುವಾಗ ಚಿರು ಸಿನಿಮಾದ ಹಾಡುಗಳನ್ನು ಗುನುಗುತ್ತ ಮೆತ್ತಗೆ ತಟ್ಟಿ ತಟ್ಟಿ ಮಲಗಿಸುತ್ತಾರಂತೆ.

ಅದರಲ್ಲೂ ಹೆಚ್ಚಾಗಿ 2010 ರಲ್ಲಿ ರಿಲೀಸ್ ಆದ ಚಿರಂಜೀವಿ ಸರ್ಜಾ ಅಭಿನಯದ ಚಿರು ಚಿತ್ರದ ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ…. ನಿನ್ನೆ ಮೊನ್ನೆ ವರೆಗೂ ಇರದ ಕನಸು ಈಗ ಮೂಡಿದೆ ಎಂಬ ಹಾಡನ್ನು ಜ್ಯೂನಿಯರ್ ಚಿರು ನಿದ್ದೆಗೆ ಜಾರೋ ಹೊತ್ತಿನಲ್ಲಿ ಹಾಡುತ್ತಾರಂತೆ.

ಅಮ್ಮನ ಧ್ವನಿಯಲ್ಲಿ ಈ ಸೊಗಸಾದ ಹಾಡುಗಳನ್ನು ಕೇಳುತ್ತ ಪುಟಾಣಿ ಚಿರು ನೆಮ್ಮದಿಯಾಗಿ ನಿದ್ದೆಗೆ ಜಾರುತ್ತಾನಂತೆ. ಈ ವಿಷ್ಯವನ್ನು ಸ್ವತಃ ಮೇಘನಾ ಹಂಚಿಕೊಂಡಿದ್ದು ಮಗುವಿಗೆ ತಂದೆಯ ನೆನಪು ಕಟ್ಟಿಕೊಡುವ ನನ್ನ ಪ್ರಯತ್ನ ಇದು. ಹೀಗಾಗಿ ಲಾಲಿ ಹಾಡುವಾಗಲೂ ಚಿರು ಹಾಡನ್ನೇ ಹಾಡುತ್ತೇನೆ ಎಂದಿದ್ದಾರೆ.

ಸ್ವತಃ ಗಾಯಕಿಯಾಗಿರುವ ಮೇಘನಾ ರಾಜ್ ಇದುವರೆಗೂ ಹಲವು ಚಿತ್ರಗಳಲ್ಲಿ ಪ್ಲೇ ಬ್ಯಾಕ್ ಸಿಂಗಿಂಗ್ ಮಾಡಿದ್ದು, ಚಿರಂಜೀವಿ ಸರ್ಜಾ ಅಭಿನಯದ ಸಿಂಗಾ ಹಾಗೂ ಶಿವಾರ್ಜುನ್ ಚಿತ್ರಕ್ಕಾಗಿಯೂ ಎರಡು ಹಾಡುಗಳನ್ನು ಹಾಡಿದ್ದರು.

ಸದ್ಯ ಜ್ಯೂನಿಯರ್ ಚಿರು ಮಡಿಲಲ್ಲಿಟ್ಟುಕೊಂಡು ತಾಯ್ತನದ ಖುಷಿ ಅನುಭವಿಸುತ್ತಿರೋ ಮೇಘನಾ ಸದಾ ಚಿರು ನೆನಪಿನ ಬುತ್ತಿಗಳನ್ನ ಹಂಚಿಕೊಳ್ಳುತ್ತ ಪತಿಯ ಅಗಲಿಕೆಯ ದುಃಖ ಸಹಿಸಿಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ.