Congress New formula : 2 ಬಂಟ, 2 ಬಿಲ್ಲವ, 2 ಮುಸ್ಲೀಂ,1 ಕ್ರಿಶ್ಚಿಯನ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಹೊಸ ಸೂತ್ರ

ಮಂಗಳೂರು : Congress New formula : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಯಾರು ಅಭ್ಯರ್ಥಿಯಾಗುತ್ತಾರೆ ಅನ್ನೋ ಲೆಕ್ಕಾಚಾರ ಶುರುವಾಗಿದೆ. ಈ ನಡುವಲ್ಲೇ ಕಾಂಗ್ರೆಸ್ ಪಕ್ಷ ಹೊಸ ಸೂತ್ರವೊಂದನ್ನು ಹೆಣೆದಿದೆ. ಬಿಲ್ಲವ, ಬಂಟ ಹಾಗೂ ಮುಸ್ಲೀಂ ಸಮಯದಾಯಕ್ಕೆ ಎರಡು ಕ್ಷೇತ್ರ ಹಾಗೂ ಕ್ರಿಶ್ಚಿಯನ್ ಹಾಗೂ ಎಸ್.ಸಿ. ಸಮುದಾಯಕ್ಕೆ ತಲಾ ಒಂದೊಂದು ಕ್ಷೇತ್ರವನ್ನು ನೀಡುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ.

ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷ ಈ ಬಾರಿ ಕರಾವಳಿ ಭಾಗದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲು ಮುಂದಾಗಿದೆ. ಕಳೆದ ಚುನಾವಣೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲನ್ನು ಕಂಡಿದ್ದವರಿಗೆ ಟಿಕೆಟ್ ನೀಡದೇ ಇರಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಪ್ರಭಾವಿ ಮುಖಂಡರಿಗೆ ಈ ಬಾರಿ ಟಿಕೆಟ್ ಕೈತಪ್ಪುವ ಸಾಧ್ಯತೆಯಿದೆ. ಜೊತೆಗೆ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಬಿಲ್ಲವ ಸಮುದಾಯವನ್ನು ತನ್ನ ತೆಕ್ಕೆಗೆ ಸೆಳೆಯಲು ತಂತ್ರ ರೂಪಿಸಿರುವ ಕಾಂಗ್ರೆಸ್ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಬಿಲ್ಲವ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಮುಂದಾಗಿದೆ.

ಮಂಗಳೂರು ವಿಧಾನಸಭಾ ಕ್ಷೇತ್ರ (ಉಳ್ಳಾಲ) ದಿಂದ ಈಗಾಗಲೇ ಹಾಲಿ ಶಾಸಕ ಯು.ಟಿ.ಖಾದರ್ ಅವರಿಗೆ ಟಿಕೆಟ್ ಖಚಿತವಾಗಿದೆ. ಜೊತೆಗೆ ಮಂಗಳೂರು ಉತ್ತರ ಕ್ಷೇತ್ರದಿಂದ ಇನಾಯತ್ ಆಲಿ ಹೆಸರು ಖಚಿತವಾದಂತಿದ್ದು, ಕ್ಷೇತ್ರದಲ್ಲಿ ಈ ಬಾರಿಯೂ ಅಲ್ಪಸಂಖ್ಯಾತ ಅಭ್ಯರ್ಥಿಗಳೇ ಕಣಕ್ಕೆ ಇಳಿಯಲಿದ್ದಾರೆ. ಇನ್ನು ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಅಭ್ಯರ್ಥಿಗಳ ಪಾಲಾಗುವ ಸಾಧ್ಯತೆಯಿದ್ದು, ಹೊಸ ಮುಖದ ಆಧಾರದ ಮೇಲೆ ಐವನ್ ಡಿಸೋಜಾ ಹೆಸರು ಮಂಚೂಣಿಯಲ್ಲಿದೆ. ಅದೇ ರೀತಿ ಜೆ ಆರ್ ಲೋಬೋ ಹೆಸರು ಕೇಳಿ ಬರುತ್ತಿದೆ. ಮಂಗಳೂರು ದಕ್ಷಿಣ ಕ್ರಿಶ್ಚಿಯನ್ಯರಿಗೆ ಖಚಿತ ಆಗಿದ್ದು ಯಾವುದೇ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಮೂಲಗಳಿಂದ ತಿಳಿದುಬಂದಿದೆ.

ಉಳಿದಂತೆ ಬೆಳ್ತಂಗಡಿ ಕ್ಷೇತ್ರದಲ್ಲಿ ಈ ಬಾರಿಯೂ ಬಿಲ್ಲವ ಸಮುದಾಯದ ಅಭ್ಯರ್ಥಿಗಳೇ ಕಣಕ್ಕೆ ಇಳಿಯಲಿದ್ದಾರೆ. ಹೊಸಮುಖವಾದರೆ ರಕ್ಷಿತ್ ಶಿವರಾಂ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಹೈಕಮಾಂಡ್ ಮೂಲಗಳಿಂದ ವರದಿಯಾಗಿದೆ. ಸುಳ್ಯ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇನ್ನು ಪುತ್ತೂರು ಕ್ಷೇತ್ರದಲ್ಲಿ ಕಳೆದ ಬಾರಿ ಬಂಟ ಸಮುದಾಯದ ಶಕುಂತಲಾ ಶೆಟ್ಟಿ ಅವರು ಸ್ಪರ್ಧಿಸಿದ್ದು, ಈ ಬಾರಿಯೂ ಬಂಟ ಸಮುದಾಯದ ಅಶೋಕ್ ಕುಮಾರ್ ರೈ ಹೊಸ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.

ಉಳಿದಂತೆ ಬಂಟ್ವಾಳ ಹಾಗೂ ಮೂಡಬಿದಿರೆ ಕ್ಷೇತ್ರದಲ್ಲಿ ಬಂಟ ಹಾಗೂ ಬಿಲ್ಲವರ ನಡುವೆ ಪೈಪೋಟಿ ಏರ್ಪಟ್ಟಿದೆ. ಸದ್ಯ ಈ ಎರಡೂ ಕ್ಷೇತ್ರದಲ್ಲಿ ಬಂಟ ಸಮುದಾಯದ ಯುವ ಮುಖಂಡ ಮಿಥುನ್ ರೈ ಹಾಗೂ ರಮಾನಾಥ ರೈ,ಇನ್ನು ಬಿಲ್ಲವ ಸಮುದಾಯದಿಂದ ಪದ್ಮರಾಜ್ ಹಾಗೂ ರಾಜಶೇಖರ ಕೋಟ್ಯಾನ್, ಪ್ರತಿಭಾ ಕುಳಾಯಿ ನಡುವೆ ಪೈಪೋಟಿ ಏರ್ಪಟ್ಟಿದೆ. ಒಂದೊಮ್ಮೆ ಮೂಡಬಿದ್ರೆ ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್ ಆಪ್ತ ಮಿಥುನ್ ರೈ ಕಣಕ್ಕೆ ಇಳಿದ್ರೆ ಅತೀ ಹೆಚ್ಚು ಬಿಲ್ಲವ ಮತದಾರರನ್ನು ಹೊಂದಿರುವ ಬಂಟ್ವಾಳ ಕ್ಷೇತ್ರವನ್ನು ಬಿಲ್ಲವ ಸಮುದಾಯಕ್ಕೆ ಬಿಟ್ಟುಕೊಡಬೇಕಾಗಿದೆ. ಇಲ್ಲಿ ಪದ್ಮರಾಜ್ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ನಡುವೆ ಮಿಥುನ್ ರೈ ಹಾಗೂ ರಮನಾಥ ರೈ ಈ ನಡುವೆ ಪೈಪೋಟಿ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಮಿಥುನ್ ರೈ ಹಾಗೂ ರಮಾನಾಥ ರೈ ಪೈಕಿ ಒಬ್ಬರಿಗೆ ಟಿಕೆಟ್ ಕೈತಪ್ಪುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಮೂಡಬಿದ್ರಿ ಹಾಗೂ ಬಂಟ್ವಾಳ ಕ್ಷೇತ್ರ ನಿಗೂಢವಾಗಿದ್ದು, ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವ ಸ್ಥಿತಿಗೆ ಬಂದು ಮುಟ್ಟಿದೆ. ಹೊಸ ಸೂತ್ರ ಹಲವು ಅಭ್ಯರ್ಥಿಗಳಲ್ಲಿ ಹೊಸ ಆತಂಕವನ್ನು ಮೂಡಿಸಿದ್ದು ಏನು ಬೇಕಾದರೂ ಆಗಬಹುದು ಎಂದು ಹೈಕಮಾಂಡ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ. ಕಾಂಗ್ರೆಸ್ ಇಡೀ ಜಿಲ್ಲೆಯ ಮತದಾರರ ಒಲವಿನ ಬಗ್ಗೆ ಸತತ ಸಮೀಕ್ಷೆಗಳನ್ನು ನಡೆಸಿದ್ದು ,ಈ ಸಮೀಕ್ಷೆ ಆಧಾರದ ಮೇಲೆ ಟಿಕೆಟ್ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಈ ನಡುವೆ ಮಾಜಿ ಸಚಿವ ಅಭಯ ಚಂದ್ರ ಜೈನ್ ಹೊಸ ಮುಖಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸುತ್ತಾ ಬಂದಿದ್ದಾರೆ. ಕರಾವಳಿಯ ಈ ಕಾಂಗ್ರೆಸ್ ನ ಹೊಸ ಸೂತ್ರಕ್ಕೆ ಬಿಜೆಪಿ ಸ್ವಲ್ಪಮಟ್ಟಿಗೆ ತಲೆಕೆಡಿಸಿಕೊಂಡಿದೆ ಎಂದು ಬಿಜೆಪಿ ಮೂಲಗಳಿಂದ ವರದಿಯಾಗಿದೆ. ಬಿಜೆಪಿ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : Karnataka Assembly Election : 2023ನೇ ಕರ್ನಾಟಕ ವಿಧಾನಸಭೆ ಚುನಾವಣೆಯ ಜೆಡಿಎಸ್‌ ಮೊದಲ ಪಟ್ಟಿ ಬಿಡುಗಡೆ : ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಇಲ್ಲಿದೆ

ಇದನ್ನೂ ಓದಿ : MLA Election 2023 : ಉಡುಪಿ, ದಕ್ಷಿಣ ಕನ್ನಡ 4 ಬಿಲ್ಲವ, 2 ಮೊಗವೀರ ಅಭ್ಯರ್ಥಿಗಳು : ಹೇಗಿದೆ ಗೊತ್ತಾ ಕಾಂಗ್ರೆಸ್‌ ಹೈಕಮಾಂಡ್‌ ಲೆಕ್ಕಾಚಾರ

2 Bunts 2 Billava 2 Muslim 1 Christian Congress new formula in Dakshina Kannada district Karnataka MLA Election 2023

Comments are closed.