ಬೆಳ್ತಂಗಡಿ : ಕರಾವಳಿಯಲ್ಲೀಗ ಮಂಗನ ಕಾಯಿಲೆಯ ಆತಂಕ ಸೃಷ್ಟಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಂಡಾಜೆ ಸಮೀಪದ ರಕ್ಷಿತಾರಣ್ಯದಲ್ಲಿ 6 ಮಂಗಗಳ ಮೃತದೇಹ ಪತ್ತೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ.

ಮಂಗಳೂರು – ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ -73 ರ ಮುಂಡಾಜೆ ಗ್ರಾಮದ ಕಾಯರ್ತೋಡಿ ರಸ್ತೆಯ ಸೀಟ್ ಬಳಿ ರಕ್ಷಿತಾರಣ್ಯ ಪ್ರದೇಶದಲ್ಲಿ ರಸ್ತೆ ಬದಿ 6 ಮಂಗಗಳ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. ವಿಷ ಸೇವನೆಯಿಂದ ಮಂಗಗಳು ಸಾವನ್ನಪ್ಪಿದೆಯಾ ? ಇಲ್ಲಾ ಮಂಗಗಳು ಕಾಯಿಲೆಯಿಂದ ಸಾವನ್ನಪ್ಪಿರೋದಾ ಅನ್ನೋ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
ಮಲೆನಾಡು ಹಾಗೂ ಕರಾವಳಿ ಭಾಗದ ಹಲವು ಕಡೆಗಳಲ್ಲಿ ಮಂಗನ ಕಾಯಿಲೆಯ ಆತಂಕ ಇರುವುದರಿಂದ ಈ ರೀತಿ ರಸ್ತೆ ಬದಿ ಮೃತ ದೇಹಗಳು ಪತ್ತೆಯಾಗಿರುವುದರಿಂದ ಜನರು ಗಾಬರಿಗೊಳ್ಳುವಂತಾಗಿದೆ.
ಈಗಾಗಲೇ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಹಾಗೂ ಪಂಚಾಯಿತಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಬಂದ ನಂತರವೇ ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.