ಮಲ್ಪೆ: (Beach uthsava 2023) ಜಿಲ್ಲೆಯ ರಜತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ಆಯೋಜಕತ್ವದಲ್ಲಿ ಮಲ್ಪೆಯಲ್ಲಿ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜನವರಿ 20 ರಿಂದ 22 ರ ತನಕ ಮಲ್ಪೆ ಬೀಚ್ ಉತ್ಸವ- 2023 ಅದ್ದೂರಿಯಾಗಿ ನಡೆಯಲಿದೆ.
ಉಡುಪಿ ಪ್ರತ್ಯೇಕ ಜಿಲ್ಲೆಯಾಗಿ ರಚನೆಗೊಂಡು ಇಪ್ಪತ್ತೈದು ವರ್ಷಗಳು ತುಂಬಿದ ಹಿನ್ನಲೆಯಲ್ಲಿ ರಜತ ಮಹೋತ್ಸವದ ಅಂಗವಾಗಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋಧ್ಯಮ ಇಲಾಖೆಯು ಜೊತೆಗೂಡಿ ಅದ್ದೂರಿಯಾಗಿ ಬೀಚ್ ಉತ್ಸವ(ವನ್ನು ಆಚರಿಸಲು ತಯಾರಿ ನಡೆಸಿವೆ. ಇಂದು ಉತ್ಸವಕ್ಕೆ ಚಾಲನೆ ಸಿಗಲಿದ್ದು, ಮೂರು ದಿನ ಮನರಂಜನಾ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಜನವರಿ 20-21 ರವರೆಗೆ ಪ್ರಮುಖ ಆಕರ್ಷಣೆಯಲ್ಲಿ ಗಾಳಿಪಟ ಉತ್ಸವ, ಆರ್ಟ್ ಕ್ಯಾಂಪ್, ಫೋಟೋ ಎಕ್ಸಿಬಿಷನ್, ಫುಡ್ ಫೆಸ್ಟಿವಲ್ ವಿಜೃಂಭಣೆಯಿಂದ ನಡೆಯಲಿದ್ದು, ಜ.21 ಮತ್ತು 22 ರಂದು ಈಜು ಸ್ಪರ್ಧೆ, ಪುರುಷರ ಕಬ್ಬಡಿ ಸ್ಪರ್ಧೆಗಳು ನಡೆಯಲಿವೆ. ಜ. 22 ರಂದು ಶ್ವಾನ ಪ್ರದರ್ಶನ, ಚಿತ್ರಕಲಾ ಸ್ಪರ್ಧೆ, ಥ್ರೋಬಾಲ್ ಸ್ಪರ್ಧೆಗಳು ನಡೆಯಲಿವೆ.
ಪ್ರತಿದಿನ ವಿನೂತನ ಸ್ಪರ್ಧೆಗಳೊಂದಿಗೆ ಸಂಜೆ ಮನಸ್ಸು ಮುದಗೊಳಿಸುವ, ಕಿವಿ ತಂಪಾಗಿಸುವ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಚಿತ್ರರಂಗದ ಪ್ರಸಿದ್ದ ಗಾಯಕ ರಾಜೇಶ್ ಕೃಷ್ಣನ್, ರ್ಯಾಪರ್ ಚಂದನ್ ಶೆಟ್ಟಿ, ಕುನಾಲ್ ಗಾಂಜಾವಾಲಾ ಹಾಗೂ ರಘು ದೀಕ್ಷಿತ್ ಅವರಿಂದ ಕಿವಿ ತಂಪಾಗಿಸುವ ಕಾರ್ಯಕ್ರಮಗಳು ನಡೆಯಲಿವೆ.
ಇನ್ನೂ ಉತ್ಸವಕ್ಕೆ ಮಲ್ಪೆಯ ಕಡಲ ಕಿನಾರೆಯಲ್ಲಿ ವಿಶಾಲವಾದ ಬೃಹತ್ ವೇದಿಕೆ ಸಿದ್ದವಾಗಿದ್ದು, ಸಾವಿರಾರು ಮಂದಿಗೆ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ರಜತೋತ್ಸವವನ್ನು ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ದಿಗೆ ಪೂರಕವಾಗಿ ಬಳಸಿಕೊಳ್ಳಲು ಹಾಗೂ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ವಿಭಿನ್ನ ಪ್ರಯತ್ನಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಮಲ್ಪೆ ಬೀಚ್ ಉತ್ಸವದಲ್ಲಿ ಕರಾವಳಿಗರಿಗೆ ಹಾಗೂ ಪ್ರವಾಸಿಗರಿಗೆ ಹೊಸ ಅನುಭವಗಳು ಸಿಗುವುದರಲ್ಲಿ ಬೇರೆ ಮಾತೇ ಇಲ್ಲ.
ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಹಂತಕರ ಸುಳಿವು ಕೊಟ್ಟವರಿಗೆ 10 ಲಕ್ಷ ಬಹುಮಾನ ಘೋಷಿಸಿದ ಎನ್ಐಎ
ಅತ್ಯಾಧುನಿಕ ಧ್ವನಿ ಬೆಳಕಿನ ವ್ಯವಸ್ಥೆಯ ಜೊತೆಗೆ ಜಿಲ್ಲೆಯಲ್ಲೇ ಪ್ರಥಮ ಬಾರಿ ಎಂಬಂತೆ ವಿಶೇಷ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲದೇ ವಿನೂತನ ಬಗೆಯ ವಾಟರ್ ಸ್ಪೋರ್ಟ್ಸ್ ಗಳನ್ನು ಪರಿಚಯಿಸಲಾಗುತ್ತದೆ. ಯಾಚ್ ಚಾರ್ಟರ್, ಕ್ಲಿಫ್ ಡೈವಿಂಗ್, ಸ್ಲಾಕ್ ಲೆನ್, ಫ್ಲೈ ಬೋರ್ಡ್, ಸ್ಕೂಬಾ ಡೈವಿಂಗ್ ನಡೆಯಲಿವೆ.
Beach Uthsava 2023: Silver Jubilee Celebration for Udupi: Beach Utsav from Today