ಕೋಟ : ಎಲ್ಲೆಡೆಯಲ್ಲಿಯೂ ಕೊರೊನಾ ಆತಂಕ ಮನೆ ಮಾಡಿದೆ. ಈ ನಡುವಲ್ಲೇ ಕೋಳಿಯ ತ್ಯಾಜ್ಯಗಳನ್ನು ನದಿಗೆ ಎಸೆಯುತ್ತಿದ್ದ ಕಿಡಿಗೇಡಿಗಳನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾರಂಪಳ್ಳಿಯಲ್ಲಿ ನಡೆದಿದೆ.

ಹಲವು ಸಮಯಗಳಿಂದಲೂ ಕೋಳಿಯ ತ್ಯಾಜ್ಯಗಳನ್ನು ಈ ಭಾಗದಲ್ಲಿನ ನದಿ ಎಸೆಯುತ್ತಿರುವುದರಿಂದಾಗಿ ದುರ್ನಾತ ಬೀರುತ್ತಿದೆ. ಈ ಕುರಿತು ಸ್ಥಳೀಯರು ಆಶಾಕಾರ್ಯಕರ್ತ ಗಮನಕ್ಕೆ ತಂದಿದ್ದಾರೆ, ಸ್ಥಳಕ್ಕೆ ಬಂದು ಆಶಾ ಕಾರ್ಯಕರ್ತೆ ಶ್ಯಾಮಲಾ ಅವರು ಪರಿಶೀಲನೆ ನಡೆಸಿದಾಗ ದುರ್ನಾತ ಬೀರುತ್ತಿತ್ತು. ಈ ಕುರಿತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೋಳಿ ತ್ಯಾಜ್ಯಗಳಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿದಿದ್ದಾರೆ.

ಗಿರಿಮುತ್ತು ಫಾರಂನಿಂದ ಕೋಳಿಯ ತ್ಯಾಜ್ಯವನ್ನು ಎಸೆಯುತ್ತಿರುವುದು ಖಚಿತವಾಗುತ್ತಿದ್ದಂತೆಯೇ ಸ್ಥಳೀಯರು ಕೋಳಿ ತ್ಯಾಜ್ಯ ಎಸೆಯುತ್ತಿರುವವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ನಂತರ ಸಾಲಿಗ್ರಾಮ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಅನುಸೂಯಾ ಆನಂದ ರಾಮ ಹೇರ್ಳೆ ಅವರು ಸ್ಥಳಕ್ಕಾಗಮಿಸಿ ಫಾರಂ ಪರವಾನಗಿಯನ್ನು ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕೋಳಿಯ ತ್ಯಾಜ್ಯಗಳನ್ನು ನದಿ ಹಾಗೂ ಎಲ್ಲೆಂದರಲ್ಲಿ ಎಸೆಯುವವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಅಂಗಡಿಯ ಲೈಸೆನ್ಸ್ ರದ್ದುಗೊಳಿಸುವ ಜೊತೆಗೆ ಭಾರೀ ದಂಡ ವಿಧಿಸಲಾಗುವುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಅರುಣ್ ತಿಳಿಸಿದ್ದಾರೆ.

ಕೋಟ ಪೊಲೀಸ್ ಠಾಣಾಧಿಕಾರಿ ಸಂತೋಷ್ ಬಿಪಿ, ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಅನುಸೂಯ ಆನಂದರಾಮ ಹೇರ್ಳೆ, ಸದಸ್ಯರಾದ ರೇಖಾ ಕೇಶವ ಕರ್ಕೇರ, ಆಶಾ ಕಾರ್ಯಕರ್ತೆ ಶ್ಯಾಮಲ ಪೂಜಾರಿ, ಕೋಟ ಆರಕ್ಷಕ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.