ಕುoದಾಪುರ : ಅಲ್ಲಿನ ಜನರಿಗೆ ಕತ್ತಲಾದ್ರೆ ಸಾಕು ಒಂದು ರೀತಿಯ ಭಯ ಅವರನ್ನು ಕಾಡುತ್ತಿದೆ. ಕಳೆದ ಕೆಲ ವರ್ಷಗಳಿಂದಲೂ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಚಿರತೆ ಜನರನ್ನು ಕಾಡುತ್ತಿದೆ. ಇದೀಗ ಹಾಡುಹಗಲಲ್ಲೇ ಮನೆಗೆ ಭೇಟಿಕೊಟ್ಟ ಚಿರತೆ ನಾಯಿಯ ಮೇಲೆ ದಾಳಿ ನಡೆಸಿರೊದು ಆತಂಕ ಮೂಡಿಸಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಮಲ್ಯಾಡಿಯಲ್ಲಿ ಹಾಡುಹಗಲಲ್ಲೇ ಚಿರತೆಯೊಂದು ಕಾಣಿಸಿಕೊಂಡಿದೆ. ನಿನ್ನೆ ಸಂಜೆಯ ವೇಳೆಯಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ದೇವಾಡಿಗರ ಪತಿ ಸುರೇಶ್ ದೇವಾಡಿಗರ ಮನೆಯ ಮುಂಭಾಗದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸಾಕು ನಾಯಿಯ ಮೇಲೆ ದಾಳಿ ನಡೆಸಿದೆ. ಈ ವೇಳೆಯಲ್ಲಿ ಐದಾರು ಮಕ್ಕಳು ಮನೆಯ ಮುಂಭಾಗದಲ್ಲಿ ಕುಳಿತು ಆನ್ ಲೈನ್ ಕ್ಲಾಸ್ ಕೇಳಿಸಿಕೊಳ್ಳುತ್ತಿದ್ದರು. ಚಿರತೆ ದಾಳಿ ಮಾಡುತ್ತಿದ್ದಂತೆಯೇ ಮಕ್ಕಳು ಕೂಗಿಕೊಂಡಿದ್ದಾರೆ. ಇದರಿಂದಾಗಿ ಚಿರತೆ ಪರಾರಿಯಾಗಿದೆ.
ಕಳೆದ ಮೂರು ವರ್ಷಗಳಿಂದಲೂ ಈ ಭಾಗದಲ್ಲಿ ಚಿರತೆಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕವನ್ನು ಮೂಡಿಸುತ್ತಿದೆ. ಪ್ರಮುಖವಾಗಿ 2019ರಿಂದ ಇಲ್ಲಿಯವರೆಗೆ ನಾಲ್ಕು ಚಿರತೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಆದರೆ ಮಲ್ಯಾಡಿ ಸುತ್ತಮುತ್ತಲೂ ಜನವಸತಿ ಪ್ರದೇಶವಿದ್ದು, ಶಾಲೆ, ಅಂಗನವಾಡಿ ಕೇಂದ್ರ ಹಾಗೂ ದೇವಸ್ಥಾನವಿದೆ. ಇದೀಗ ಚಿರತೆ ದಾಳಿಯಿಂದಾಗಿ ಜನರಲ್ಲಿ ಭೀತಿ ಉಂಟಾಗಿದೆ.
ಈ ಬಾರಿ ಮತ್ತೆ ಚಿರತೆ ಕಾಣಿಸಿಕೊಂಡಿರುವುದರಿoದಾಗಿ ಆತಂಕಗೊoಡಿರುವ ಜನರು ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸುತ್ತಿದ್ದಾರೆ. ಅಲ್ಲದೇ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಚಿರತೆಯನ್ನು ಸೆರೆ ಹಿಡಿಯಲು ಈ ಭಾಗದಲ್ಲಿ ಬೋನ್ ಇಡುವುದಾಗಿ ತಿಳಿಸಿದ್ದಾರೆ.