ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಅಪಘಾತ : ರೈತ ಸಾವು

ಬಾಗಲಕೋಟೆ : ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಗನ ಕಾರು ಬೈಕ್‌ಗೆ ಡಿಕ್ಕಿ ಹೊಡದು ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ವ್ಯಾಪ್ತಿಯ ಕೂಡಲ ಸಂಗಮ ಕ್ರಾಸ್ ಬಳಿ ರಾ.ಹೆ.50ರಲ್ಲಿ ನಡೆದಿದೆ.

ಬಾಗಲಕೋಟೆ ತಾಲೂಕಿನ ಚಿಕ್ಕಹಂಡರಗಲ್ ನಿವಾಸಿ ಕೂಡಲೆಪ್ಪ ಬೋಳಿ(58 ವರ್ಷ) ಅಪಘಾತದಲ್ಲಿ ಮೃತಪಟ್ಟ ಬೈಕ್‌ ಸವಾರ. ಡಿಸಿಎಂ ಲಕ್ಷ್ಮಣ ಸವದಿ ಅವರ ಹಿರಿಯ ಮಗ ಚಿದಾನಂದ ಸವದಿ ಸೇರಿ 12 ಜನರು 2 ಕಾರಿನಲ್ಲಿ ಪ್ರವಾಸಕ್ಕೆ ತೆರಳಿ ವಾಪಾಸು ಬರುತ್ತಿ ದ್ದರು. ಈ ವೇಳೆಯಲ್ಲಿ ಹೊಲದಿಂದ ವಾಪಾಸು ಬರುತ್ತಿದ್ದ ಕೂಡಲೆಪ್ಪ ಬೋಳಿ ಅವರ ಬೈಕ್ ಗೆ ಢಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯ ಗೊಂಡಿದ್ದ ಬೈಕ್ ಸವಾರನನ್ನು ಸ್ಥಳದಲ್ಲಿಯೇ ಬಾಗಲಕೋಟೆಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.


ಇನ್ನು ಡಿಸಿಎಂ ಸವದಿ ಪುತ್ರ ಕಾರಿನ ನಂಬರ್ ಪ್ಲೇಟ್ ಜಖಂಗೊಳಿಸಿ, ಕಾರು ಯಾರದ್ದು ಎಂದು ತಿಳಿಯದಂತೆ ಮಾಡಿದ್ದಾರೆ. ಅಲ್ಲದೇ ತಾನು ಡಿಸಿಎಂ ಪುತ್ರ ಎಂದು ಬೆದರಿಕೆಯೊಡ್ಡಿದ್ದು, ಮತ್ತೊಂದು ಕಾರಿನಲ್ಲಿ ಎಸ್ಕೆಪ್ ಆಗಲು ಯತ್ನಿಸಿದ್ದಾರೆಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಆದರೆ ಸಂಬಂಧಿಕರ ಆರೋಪವನ್ನು ಚಿದಾನಂದ ಸವದಿ ತಳ್ಳಿ ಹಾಕಿದ್ದಾರೆ. ನಾನು ಸ್ನೇಹಿತನ ಕಾರಿನಲ್ಲಿ ಮುಂದೆ ತೆರಳುತ್ತಿದ್ದೆ. ನಾನು ತೆರಳುತ್ತಿದ್ದ ಕಾರು ಅಪಘಾತವಾದ ಸ್ಥಳದಿಂದ ಸುಮಾರು 30 ಕಿಲೋ ಮೀಟರ್ ಮುಂದಿತ್ತು. ನನ್ನ ಕಾರನ್ನು ನನ್ನ ಚಾಲಕ ಚಲಾಯಿಸುತ್ತಿದ್ದ. ನನ್ನ ಕಾರಿನಲ್ಲಿ ಮೂವರು ಸ್ನೇಹಿತರು ಪ್ರಯಾಣಿಸುತ್ತಿದ್ದರು.

ಘಟನೆಯ ವೇಳೆ ಸ್ಥಳದಲ್ಲಿ ಯಾರೂ ಇರಲಿಲ್ಲ. ಆ್ಯಂಬುಲೆನ್ಸ್‌ಗೆ ಶಿಫ್ಟ್ ಮಾಡುವ ವೇಳೆ ಜನರು ಬಂದಿದ್ದರು. ಸುಮಾರು 6 ಗಂಟೆಯ ವೇಳೆಗೆ ನನಗೆ ಕರೆ ಬಂದಿತ್ತು. ಕಾರು ಅಪಘಾತವಾಗಿರುವ ಬಗ್ಗೆ ನನ್ನ ಚಾಲಕ ಕರೆ ಮಾಡಿದ್ದ. ನಾನು, ನನ್ನ ಸ್ನೇಹಿತರು ಯಾರಿಗೂ ಬೆದರಿಕೆಯನ್ನ ಹಾಕಿಲ್ಲ. ಬೈಕ್ ಸವಾರ ಹೆಲ್ಮೆಟ್‌ನ್ನೂ ಧರಿಸಿರಲಿಲ್ಲ. ಘಟನೆಯ ಬಗ್ಗೆ ನಮಗೂ ನೋವಿದೆ ಎಂದಿದ್ದಾರೆ.

Comments are closed.