ಮಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣದ ದಿನೇ ದಿನೇ ಇಳಿಕೆಯಾಗುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ನಿಧಾನವಾಗಿ ಕೊರೊನಾ ಪ್ರಕರಣ ಏರಿಕೆಯಾಗುತ್ತಿದೆ. ಆದ್ರಲ್ಲೂ ಸಾವಿನ ಸಂಖ್ಯೆಯಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ದಾಖಲೆ ಬರೆಯುತ್ತಿದೆ.

ಕೊರೊನಾ ಮೊದಲ ಅಲೆಯಲ್ಲಿ ಕೊರೊನಾ ಸಾವಿನ ಮೂಲಕ ಜಿಲ್ಲೆಯ ಜನರ ನಿದ್ದೆಗೆಡಿಸಿದ್ದ ಕೊರೊನಾ ಇದೀಗ ಎರಡನೇ ಅಲೆಯಲ್ಲಿಯೂ ಕೊರೊನಾ ಸಾವಿನ ಸರಣಿ ಮುಂದುವರಿದಿದೆ. ಎರಡನೇ ಅಲೆಯ ಆರಂಭದಿಂದಲೂ ಡೇಂಜರ್ ಜಿಲ್ಲೆಗಳ ಸಾಲಿನಲ್ಲಿ ನಿಂತಿದ್ದ ದಕ್ಷಿಣ ಕನ್ನಡ, ಇದೀಗ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದ್ರೆ ಏರಿಕೆಯನ್ನು ಕಾಣುತ್ತಿದೆ.

ಜಿಲ್ಲೆಯನ್ನು ತಡವಾಗಿ ಅನ್ ಲಾಕ್ ಮಾಡಿದ್ರೂ ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕು ಏರಿಕೆಯಾಗುತ್ತಿದೆ. ಪ್ರಮುಖವಾಗಿ ನಿನ್ನೆ ಜಿಲ್ಲೆಯಲ್ಲಿ ೩೦೪ ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೯೦,೫೨೦ಕ್ಕೆ ಏರಿಕೆಯನ್ನು ಕಂಡಿದೆ. ಅಲ್ಲದೇ ಜಿಲ್ಲೆಯಲ್ಲಿ ಒಟ್ಟು ೨೭೯೦ ಸಕ್ರೀಯ ಕೊರೊನಾ ಪ್ರಕರಣಗಳಿವೆ. ಜಿಲ್ಲೆಯಲ್ಲಿ ನಿನ್ನೆ ೩೩೫ ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿರೋ ಕೊರೊನಾ ಸಾವಿನ ಪ್ರಕರಣ. ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೊರೊನಾ ಸಾವಿನ ಪ್ರಕರಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಕೆಯನ್ನು ಕಂಡಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಸಾವಿನ ಸರಣಿ ಮುಂದುವರಿದಿದೆ. ಪ್ರಮುಖವಾಗಿ ನಿನ್ನೆ ರಾಜ್ಯದಲ್ಲಿ ಒಟ್ಟು ೭೫ ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ೧೪ ಮಂದಿ ಮೃತಪಟ್ಟಿದ್ದು, ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿಯೇ ಅತೀ ಹೆಚ್ಚು ಸಾವು ಜಿಲ್ಲೆಯಲ್ಲಿ ದಾಖಲಾಗುತ್ತಿದೆ. ಇದುವರೆಗೆ ಕೊರೊನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೧೨೭೯ ಮಂದಿಯನ್ನು ಬಲಿ ಪಡೆದಿದೆ.

ಅನ್ ಲಾಕ್ ಬೆನ್ನಲ್ಲೇ ಜಿಲ್ಲೆಯಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ಜನರು ಸಾಮಾಜಿಕ ಅಂತರ, ಮಾಸ್ಕ್ ಬಳಕೆಯನ್ನೇ ಮರೆಯುತ್ತಿದ್ದಾರೆ. ಶಾಪಿಂಗ್ ಮಾಲ್ ಗಳಲ್ಲಿ ಜನರಿಗೆ ತುಂಬಿತುಳುಕುತ್ತಿದ್ದಾರೆ. ಬಸ್ ಗಳಲ್ಲಿ ಪ್ರಯಾಣಿಕರು ಹೆಚ್ಚಾಗಿ ಮಾಸ್ಕ್ ಬಳಕೆ ಮಾಡುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ಮಾರ್ಗಸೂಚಿಯ ಕಡ್ಡಾಯಪಾಲನೆ ಆಗುತ್ತಿಲ್ಲ. ನೆರೆಯ ಕೇರಳದಲ್ಲಿ ಡೆಲ್ಟಾ ಪ್ರಕರಣ ಹೆಚ್ಚುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದ್ರೆ ಜಿಲ್ಲೆಯಲ್ಲಿ ಕೊರೊನಾ ಮೂರನೇ ಅಲೆ ಬಹುಬೇಗನೆ ಕಾಣಿಸಿಕೊಂಡ್ರು ಅಚ್ಚರಿಯಿಲ್ಲ.
