ಸೋಣಿ ಗ್ರಾಮದಲ್ಲಿ ಮೂಲ ಸೌಕರ್ಯದ ಕೊರತೆ: ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ

ಸಿದ್ದಾಪುರ: (Election boycott) ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಕೆಳಸೋಣಿ ಗ್ರಾಮಸ್ಥರು ಕುಡಿಯುವ ನೀರಿನ ವ್ಯವಸ್ಥೆ ಹಾಗೂ ರಸ್ತೆ ದುರಸ್ತಿ ಕಾಣದ ಹಿನ್ನಲೆಯಲ್ಲಿ ಶಾಸಕರು ಹಾಗೂ ಗ್ರಾಮ ಪಂಚಾಯತ್‌ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಚುನಾವಣಾ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದಾರೆ.

ಸಿದ್ದಾಪುರ ಗ್ರಾಮಕ್ಕೆ ಸಂಬಂಧಪಟ್ಟ, ಕಾಡುಗಳ ನಡುವೆ ಇರುವಂತಹ ಒಂದು ಕುಗ್ರಾಮ ಸೋಣಿ. ಈ ಪ್ರದೇಶದಲ್ಲಿ ಸುಮಾರು ಮೂವತ್ತು ಮನೆಗಳಿದ್ದು, ಇದರಲ್ಲಿ ಇಪ್ಪತ್ತೆಂಟು ಮನೆಗಳು ಎಸ್‌ ಟಿ ಸಮುದಾಯಕ್ಕೆ ಸೇರಿರುವ ಮನೆಗಳಾಗಿವೆ. ಹಲವು ವರ್ಷಗಳಿಂದ ಈ ಗ್ರಾಮ ಯಾವುದೇ ಅಭಿವೃದ್ದಿಯನ್ನು ಕಂಡಿಲ್ಲ. ಮಳೆಗಾಲ ಆರಂಭವಾಯಿತೆಂದರೆ ಸಾಕು ಮಳೆಯ ನೀರಿಗೆ ರಸ್ತೆಗಳು ಕೊಚ್ಚಿಕೊಂಡು ಹೋಗುತ್ತದೆ. ವಾಹನವಿರಲಿ ನಡೆದುಕೊಂಡು ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿ ಈ ಗ್ರಾಮಸ್ಥರದ್ದು.

ಇನ್ನೂ ಯಾರಿಗಾದರೂ ತುರ್ತು ಆರೋಗ್ಯ ಹದಗೆಟ್ಟಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದರೂ ಕೂಡ ಇಲ್ಲಿ ಯಾವುದೇ ಸೌಲಭ್ಯವಿಲ್ಲ. ಗ್ರಾಮದಿಂದ ಪೇಟೆಗೆ ಸರಿಸುಮಾರು 7 ಕಿ.ಮೀ ಕ್ರಮಿಸಬೇಕಾಗುತ್ತದೆ. ರಸ್ತೆಯ ಸ್ಥಿತಿಗೆ ಯಾವುದೇ ವಾಹನಗಳು ಈ ಗ್ರಾಮಕ್ಕೆ ಬರಲು ಒಪ್ಪುವುದಿಲ್ಲ. ಒಂದು ವೇಳೆ ಬಂದರೂ ಕೂಡ ಅರ್ಧ ದಾರಿಯಲ್ಲೇ ಬಿಟ್ಟು ಹೋಗುತ್ತಾರೆ. ಪ್ರತಿಭಾರಿ ಗ್ರಾಮಸ್ಥರೇ ಮುಂದಾಗಿ ರಸ್ತೆಯ ದುರಸ್ತಿ ಮಾಡುತ್ತಿದ್ದು, ಗ್ರಾಮ ಪಂಚಾಯತ್‌ ಯಾವುದೇ ಕ್ರಮಗಳನ್ನು ಈ ವರೆಗೂ ಕೈಗೊಂಡಿಲ್ಲ. ಮಳೆಗಾಲದಲ್ಲಿ ಮಾತ್ರವಲ್ಲ, ಎಲ್ಲಾ ಸಮಯದಲ್ಲೂ ಇದೇ ರೀತಿಯಾಗಿದೆ. ಇನ್ನೂ ಬೇಸಿಗೆ ಕಾಲ ಬಂತೆಂದರೆ ಸಾಕು ಕುಡಿಯುವ ನೀರಿಗೆ ಗ್ರಾಮದಲ್ಲಿ ಹಾಹಾಕಾರ ಪ್ರಾರಂಭವಾಗುತ್ತದೆ. ಪ್ರತಿ ಮನೆಯಲ್ಲೂ ಬಾವಿಗಳು ಇದ್ದರು ಕೂಡ ಬೇಸಿಗೆ ಕಾಲ ಪ್ರಾರಂಭವಾಯಿತೆಂದರೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ. ಈ ಬಗ್ಗೆ ಗ್ರಾಮ ಪಂಚಾಯತ್‌ ಗೆ ಅನೇಕ ಬಾರಿ ಗ್ರಾಮಸ್ಥರು ದೂರು ನೀಡಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಬ್ಯಾನರ್‌ ಅಳವಡಿಸಿ, ಚುನಾವಣಾ ಬಹಿಷ್ಕಾರ ಪ್ರತಿಭಟನೆಯನ್ನು ಆರಂಭಿಸಿದ್ದಾರೆ.

Election boycott: Lack of infrastructure in Soni village: Election boycott by villagers
Photo credit: manjunath naik

ಸಿದ್ದಾಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಸೋಣಿ ಗ್ರಾಮ ಕಾಡು ಪ್ರದೇಶಗಳನ್ನು ಒಳಗೊಂಡಂತಹ ಪ್ರದೇಶವಾಗಿದೆ. ಇಲ್ಲಿ ನೂರರಲ್ಲಿ 99 ಪ್ರತಿಶತಃ ಮನೆಗಳು ಎಸ್‌ ಟಿ ಜನಾಂಗದವರದ್ದೇ ಆಗಿದೆ. ಆದರೂ ಕೂಡ ಈ ಗ್ರಾಮದಲ್ಲಿ ಮೂಲ ಸೌಕರ್ಯ ಮರೆಯಾಗಿರುವುದು, ಇಲ್ಲಿಯ ರಸ್ತೆಗಳು ಮಳೆಗೆ ಕೊಚ್ಚಿಕೊಂಡು ಹೋಗಿ ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ರೋಗಿಗಳನ್ನು ಹಿರಿಯ ನಾಗರೀಕರನ್ನು ಕರೆದೊಯ್ಯಲು ಇಲ್ಲಿ ರಸ್ತೆಗಳಿಲ್ಲ. ಚುನಾವಣೆ ಹತ್ತಿರವಾದಾಗ ಪ್ರತ್ಯಕ್ಷರಾಗುವ ಜನಪ್ರತಿನಿಧಿಗಳು ಅಧ್ಯಕ್ಷರು ಗೆದ್ದ ನಂತರ ಜನರ ಸಮಸ್ಯೆಯನ್ನು ಕೇಳಲು ಯಾವುದೇ ಒಲವು ತೋರಿಸುತ್ತಿಲ್ಲ. ಹಲವು ಬಾರಿ ಸ್ಥಳೀಯಾಡಳಿತದಿಂದ ಮನವಿ ಮಾಡಿದ್ದರೂ ಕೂಡ ಈ ಬಗ್ಗೆ ಏನೂ ಪ್ರಯೋಜನವಾಗಿಲ್ಲ.

ಬ್ಯಾನರ್‌ ನಲ್ಲೇನಿದೆ?
“ನಮಗೆ ಹಣ ಬೇಡ. ರಸ್ತೆ ಅಭಿವೃದ್ದಿ ಮಾಡಿ. ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಸಿದ್ದಾಪುರ ಗ್ರಾಮದ ಕೆಳಸೋಣಿ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ರಸ್ತೆ ದುರಸ್ತಿ ಕಾಣದೇ ಜನಪ್ರತಿನಿಧಿಗಳು ಮತ್ತು ಗ್ರಾ.ಪಂ ಅಧಿಕಾರಿಗಳು ಇವರಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೊಳಪಟ್ಟಿರುತ್ತೇವೆ. ಇದರ ಅಭಿವೃದ್ದಿ ಆಗುವವರೆಗೂ ಮುಂಬರುವ ಎಲ್ಲಾ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸುತ್ತೇವೆ. ರಸ್ತೆ ದುರಸ್ತಿಯಾಗುವವರೆಗೂ ಯಾವುದೇ ರಾಜಿ ಸಂದಾನಗಳಿಗೂ ಅವಕಾಶವಿರುವುದಿಲ್ಲ” ಎಂಬುದಾಗಿ ಉಲ್ಲೇಖಿಸಿದ್ದಾರೆ.

Election boycott: Lack of infrastructure in Soni village: Election boycott by villagers
Photo credit: manjunath naik

ಇದನ್ನು ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು ಹಾಗೂ ಗ್ರಾ.ಪಂ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರನ್ನು ಸಂತೈಸಲು ಪ್ರಯತ್ನಿಸಿದ್ದಾರೆ. ಗ್ರಾ. ಪಂ. ನಲ್ಲಿರುವಷ್ಟು ಬಜೆಟ್‌ ನಲ್ಲಿ ಸದ್ಯದ ಆಗುವಷ್ಟು ರಸ್ತೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದು. ಇನ್ನೂ ಎರಡು ಮೂರು ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಹೇಳಿದ್ದಾರೆ ಎಂದು ಸೋಣಿಯ ಗ್ರಾಮಸ್ಥರಾದ ಮಂಜುನಾಥ ನಾಯ್ಕ್‌ ಇವರು ನ್ಯೂಸ್‌ ನೆಕ್ಸ್ಟ್‌ ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಅಧಿಕಾರಿಗಳು ಈ ಕಾಮಗಾರಿಯನ್ನೂ ಪೂರ್ತಿಯಾಗಿ ಮಾಡಿ ಮುಗಿಸುವವರೆಗೂ ನಾವು ಈ ಬಹಿಷ್ಕಾರವನ್ನು ಮುಂದುವರೆಸುತ್ತೇವೆ. ನಮ್ಮ ಗ್ರಾಮದ ಅಭಿವೃದ್ದಿಯಾಗಬೇಕು. ಅಲ್ಲಿಯವರೆಗೂ ನಾವು ಯಾವ ರೀತಿಯ ಆಮೀಷಗಳಿಗಾಗಲಿ, ಭರವಸೆಗಳಗಾಗಲಿ ಒಪ್ಪುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ : Bengaluru Prostitution: ಸಿಲಿಕಾನ್‌ ಸಿಟಿಯಲ್ಲಿ ನಡೆಯುತ್ತಿದೆ ವೇಶ್ಯಾವಾಟಿಕೆ ದಂಧೆ: ಖೆಡ್ಡಾಗೆ ಬಿದ್ರೆ ಕಥೆ ಅಷ್ಟೇ!

Election boycott: Lack of infrastructure in Soni village: Election boycott by villagers

Comments are closed.