ಮಂಗಳೂರು : ಕಳೆದೊಂದು ದಿನದಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರು ನಗರ ಹಲವು ಪ್ರದೇಶಗಳಲ್ಲಿ ಕೃತಕ ನೆರೆ ಆವರಿಸಿದ್ದು, ನೂರಾರು ಮನೆಗಳು ಜಲಾವೃತಗೊಂಡಿದೆ.

ನಿನ್ನೆಯಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಮಂಗಳೂರು ನಗರದ ಜಪ್ಪಿನ ಮೊಗರು, ಕುಡಪಾಡಿ ಸೇರಿದಂತೆ ಹಲವು ಕಡೆಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ.

ಮುಳುಗಡೆಯಾಗಿರುವ ಮನೆಗಳಲ್ಲಿ ಸಿಲುಕಿರುವವರನ್ನು ರಕ್ಷಿಸುವ ನಿಟ್ಟಿನಲ್ಲಿ ಅಗ್ನಿ ಶಾಮಕದಳ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

ನಗರದ ದೇರೆ ಬೈಲ್ ನಲ್ಲಿರುವ ವಸತಿ ಸಮುಚ್ಚಯವೊಂದು ಕುಸಿಯುವ ಭೀತಿಯಲ್ಲಿದೆ. ಅಪಾರ್ಟ್ ಮೆಂಟ್ ನಲ್ಲಿರುವ ಮನೆ ಹಾಗೂ ಅಂಗಡಿಗಳನ್ನು ತೆರವು ಮಾಡಲಾಗಿದೆ.

ಇನ್ನು ಭಾರಿ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿಯೂ ನೀರು ತುಂಬಿದ್ದು, ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಪ್ರಗತಿಯಲ್ಲಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಿರ್ಮಾಣವಾದ ರಸ್ತೆಯಲ್ಲೀಗ ನೀರು ತುಂಬಿಕೊಂಡಿರುವುದರ ವಿರುದ್ದ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.