ಉಡುಪಿ : ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಕ್ರಿಕೆಟ್ ಸಾಧನೆಗಳ ಬಗ್ಗೆ ಎರಡು ಮಾತಿಲ್ಲ. ಹೀಗಾಗಿಯೇ ಅವರಿನ್ನೂ ಅಭಿಮಾನಿಗಳ ಪಾಲಿಗೆ ಕ್ರಿಕೆಟ್ ದೇವರಾಗಿಯೇ ಉಳಿದಿದ್ದಾರೆ. ಸಚಿನ್ ತೆಂಡೂಲ್ಕರ್ ಎಲ್ಲಿಯವರು ಎಂದು ಕೇಳಿದರೆ ಬಹುತೇಕರು ಮಹಾರಾಷ್ಟ್ರ ಎಂದೇ ಉತ್ತರ ನೀಡುತ್ತಾರೆ. ಆದರೆ ಕ್ರಿಕೆಟ್ ಲೋಕದ ದಂತಕತೆ ಸಚಿನ್ ಮೂಲತಃ ಕರ್ನಾಟಕದ ಕರಾವಳಿ ಭಾಗದವರು ಎಂಬ ಸುದ್ದಿ ಮಾತ್ರ ಹಲವು ಊಹಾಪೋಹಗಳ ಜೊತೆ ಹರಿದಾಡುತ್ತಲೇ ಇದೆ.
ಈ ಹಿಂದೆ ಕೂಡ ಸಚಿನ್ ತೆಂಡೂಲ್ಕರ್ ಉಡುಪಿ ಮೂಲದವರು ಎಂಬ ಸುದ್ದಿ ಹರಿದಾಡಿತ್ತು. ಇದೀಗ ನಾಗಾರಾಧನೆಯ ಕಾರಣಕ್ಕೆ ಈ ವಿಚಾರ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಕರಾವಳಿ ಭಾಗದಲ್ಲಿ ನಾಗಾರಾಧನೆಗೆ ತುಂಬಾನೇ ಮಹತ್ವವಿದೆ . ಸಚಿನ್ ತೆಂಡೂಲ್ಕರ್ ಅವರ ಕುಟುಂಬಕ್ಕೆ ಸೇರಿದ ನಾಗಬನವೊಂದು ಉಡುಪಿಯ ಅತ್ರಾಡಿಯಲ್ಲಿದೆ ಎಂದು ಹೇಳಲಾಗುತ್ತಿದೆ.
ಹಾಗಂತ ಇದೇನು ನಿನ್ನೆ ಮೊನ್ನೆಯ ವದಂತಿಯಲ್ಲ. ಸಚಿನ್ ಹಾಗೂ ಉಡುಪಿ ನಡುವಿನ ನಂಟಿನ ವದಂತಿ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಸಚಿನ್ ಕುಟುಂಬದ ಹಿರಿಯರು ಉಡುಪಿಯಲ್ಲೇ ಇದ್ದರು. ಆದರೆ ಆಸ್ತಿ ವಿಚಾರವಾಗಿ ಉಂಟಾದ ಕಲಹದಿಂದಾಗಿ ಬೆಳಗಾವಿಗೆ ತೆರಳಿದ ಸಚಿನ್ ಕುಟುಂಬ ಕ್ರಮೇಣವಾಗಿ ಮಹಾರಾಷ್ಟ್ರಕ್ಕೆ ವಲಸೆ ಹೋಯ್ತು ಎಂದು ಹೇಳಲಾಗುತ್ತದೆ.
ಉಡುಪಿಯ ಅತ್ರಾಡಿಯಲ್ಲಿರುವ ಅಪ್ಪು ಪ್ರಭು ಎಂಬವರು ಈ ಎಲ್ಲಾ ವದಂತಿಗಳಿಗೆ ಮತ್ತಷ್ಟು ಪುಷ್ಟಿಯಂತೆ ಕಂಡಿದ್ದಾರೆ. ಈ ಹಿಂದೆ ಕೂಡ ಅಪ್ಪು ಪ್ರಭು ಸಚಿನ್ ತೆಂಡೂಲ್ಕರ್ ಕುಟುಂಬಸ್ಥರು ಎಂಬ ವಿಚಾರ ವ್ಯಾಪಕವಾಗಿ ಚರ್ಚೆಯಾಗಿತ್ತು. ಇದೀಗ ಮತ್ತೆ ಈ ವಿಚಾರಕ್ಕೆ ರೆಕ್ಕೆ ಪುಕ್ಕ ಬಂದತಾಗಿದೆ. ಉಡುಪಿಯ ಬಹುತೇಕ ಕಡೆಗಳಲ್ಲಿ ತೆಂಡೂಲ್ಕರ್ ಎಂಬ ಅಡ್ಡ ಹೆಸರಿನ ಅನೇಕರಿದ್ದಾರೆ. ಆದರೆ ಅಪ್ಪು ಪ್ರಭು ಮಾತ್ರ ಎಲ್ಲಿಯೂ ಈ ವಿಚಾರದ ಲಾಭವನ್ನು ಪಡೆಯದೇ ಸರಳವಾಗಿ ಬದುಕಿದ್ದಾರೆ.
ಅಪ್ಪು ಪ್ರಭು ನೀಡಿರುವ ಮಾಹಿತಿಯ ಪ್ರಕಾರ ಇವರ ತಂದೆ ವಿಠ್ಠಲ ಪ್ರಭುವಿಗೆ ಒಟ್ಟು 5 ಮಂದಿ ಸಹೋದರರು. ಈ ಸಹೋದರರಲ್ಲಿ ಲಕ್ಷ್ಮಣ ಪ್ರಭು ಹಿರಿಯರು. ನಂತರ ಜನಿಸಿದವರು ರಾಮ ಹಾಗೂ ಕೃಷ್ಣ ಹೆಸರಿನ ಅವಳಿ ಸಹೋದರರು. ಈ ಐವರಲ್ಲಿ ಒಂದು ಕುಟುಂಬ ಮಹಾರಾಷ್ಟ್ರಕ್ಕೆ ವಲಸೆ ಹೋಗಿದೆ. ಹಾಗೂ ಅವರ ಮೊಮ್ಮಗನೇ ಸಚಿನ್ ತೆಂಡೂಲ್ಕರ್ ಎಂದು ಹೇಳಿದ್ದಾರೆ. ಆದರೆ ಈ ಎಲ್ಲಾ ಮಾತಿಗೆ ಸಾಕ್ಷ್ಯ ಎಂಬುವಂತ ಯಾವುದೇ ಪುರಾವೆಗಳು ಅಪ್ಪು ಪ್ರಭು ಬಳಿ ಇಲ್ಲ.
ಸಚಿನ್ ತೆಂಡೂಲ್ಕರ್ ಅಜ್ಜ ಭೂ ಒಡೆತನದ ವಿಚಾರದಲ್ಲಿ ಗಲಾಟೆಯಾದ ಬಳಿಕ ಉಡುಪಿಯನ್ನು ತೊರೆದು ಬೆಳಗಾವಿ ಭಾಗಕ್ಕೆ ಹೋಗಿದ್ದರು ಎನ್ನಲಾಗಿದೆ. ಇದಾದ ಬಳಿಕ ಅವರು ಅಲ್ಲಿಂದ ಮಹಾರಾಷ್ಟ್ರಕ್ಕೆ ತೆರಳಿದ್ದರು. ಆದರೆ ಸಚಿನ್ ತೆಂಡೂಲ್ಕರ್ ಕುಟುಂಬಕ್ಕೆ ಸೇರಿದ ನಾಗಬನ ಇನ್ನೂ ಅತ್ರಾಡಿಯ್ಲಲಿದೆ.
ಕೆಲ ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ಕುಕ್ಕೆ ಸುಬ್ರಹ್ಮಣ ದೇಗುಲದಲ್ಲಿ ಸರ್ಪ ಸಂಸ್ಕಾರ ನಡೆಸಿದ್ದರು. ನಾಗ ಮೂಲ ತಿಳಿಯದವರು ಈ ರೀತಿ ಕುಕ್ಕೆಗೆ ತೆರಳಿ ನಾಗನ ಸೇವೆ ಸಲ್ಲಿಸಿದ್ದರು. ಸಚಿನ್ ಇಲ್ಲೇಕೆ ಪೂಜೆ ಸಲ್ಲಿಸಿದರು ಎಂಬ ವಿಚಾರ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಸಚಿನ್ ಮೂಲತಃ ಉಡುಪಿಯವರಾ ಅಲ್ಲವಾ ಎನ್ನುವ ಬಗ್ಗೆ ಸ್ವತಃ ಸಚಿನ್ ಅವರೇ ಸ್ಪಷ್ಟನೆ ನೀಡಬೇಕಿದೆ.
ಇದನ್ನು ಓದಿ : Ross Taylor retirement : ಐಪಿಎಲ್ 2022 ರ ಮೆಗಾ ಹರಾಜಿನ ಮೊದಲೇ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ RCB ಆಟಗಾರ
ಇದನ್ನೂ ಓದಿ : Glenn Maxwell RCB Captain : ಗ್ಲೆನ್ ಮ್ಯಾಕ್ಸ್ವೆಲ್ ಆರ್ಸಿಬಿ ನಾಯಕ ಎಂದ ಮಾಜಿ ಕೋಚ್ ಡೇನಿಯಲ್ ವೆಟ್ಟೋರಿ
sachin tendulkar family is basically from udupi