Stone mining Blast : ಕಾರ್ಕಳದ ಕಲ್ಲಿನ ಕೋರೆಯಲ್ಲಿ ಸ್ಪೋಟ : ಇಬ್ಬರು ಗಂಭೀರ

ಕಾರ್ಕಳ : ಕಲ್ಲಿನ ಕೋರೆಯಲ್ಲಿ(Stone mining Blast) ಸ್ಪೋಟಗೊಂಡು ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಜಾರ್ಕಳದ ಕಲ್ಲಿನ ಕೋರೆಯಲ್ಲಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ತಮಿಳುನಾಡು ಮೂಲದ ಮಂಜುನಾಥ (44 ವರ್ಷ ), ರಾಘವೇಂದ್ರ(40 ವರ್ಷ) ಎಂಬವರೇ ಗಾಯಗೊಂಡಿರುವ ಕಾರ್ಮಿಕರಾಗಿದ್ದಾರೆ. ಅಲ್ಲದೇ ಇಬ್ಬರೂ ಕೂಡ ವಿಕಲಚೇತನ ರಾಗಿದ್ದಾರೆ ಎಂದು ತಿಳಿದು ಬಂದಿದೆ. ಕ್ವಾರಿಯಲ್ಲಿ ಕಲ್ಲನ್ನು ಒಡೆಯಲು ಸ್ಪೋಟಗಳನ್ನು ಬಳಸಲಾಗುತ್ತಿದ್ದು, ರಾಸಾಯನಿಕ ವಸ್ತುಗಳ ಬಳಕೆಯ ವೇಳೆಯಲ್ಲಿ ನಿರ್ಲಕ್ಷ್ಯ ತೋರಿರು ವುದೇ ಘಟನೆಗೆ ಕಾರಣವೆನ್ನಲಾಗುತ್ತಿದೆ. ಕಲ್ಲಿನ ಕ್ವಾರಿಯಲ್ಲಿ ಸ್ಪೋಟದ ಸದ್ದಿಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ಗಾಯಾಳುಗಳನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಗಾಯಾಳು ರಾಘವೇಂದ್ರ ಹಾಗೂ ಮಂಜುನಾಥ್‌ ಸಹೋದರರಾಗಿದ್ದು, ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಲ್ಲಿನ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚಿಗಷ್ಟೇ ಜಾರ್ಕಳದ ಕಲ್ಲಿನ ಕ್ವಾರಿಯಲ್ಲಿ ಕೆಲಸಕ್ಕೆ ಸೇರ್ಪಡೆಯಾಗಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿನ ಕಲ್ಲಿನ ಕ್ವಾರಿಯಲ್ಲಿ ನಡೆದ ದುರಂತದ ಬೆನ್ನಲ್ಲೇ ಉಡುಪಿ ಜಿಲ್ಲೆಯಲ್ಲಿಯೂ ಇದೀಗ ಸ್ಪೋಟ ಸಂಭವಿಸಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಕಲ್ಲುಕ್ವಾರಿಗಳಲ್ಲಿ ಸ್ಪೋಟಗಳನ್ನು ಬಳಸುವುದಕ್ಕೆ ನಿಷೇಧ ಹೇರಲಾಗಿದೆ. ಆದರೂ ಸ್ಪೋಟಗಳನ್ನು ನಡೆಸುತ್ತಿರುವುದರಿಂದಾಗಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಡೆಲ್ಟಾ ಫ್ಲಸ್‌ಗಿಂತ 6 ಪಟ್ಟು ಹೆಚ್ಚು ಅಪಾಯಕಾರಿಯಂತೆ ಓಮಿಕ್ರಾನ್‌

ಇದನ್ನೂ ಓದಿ : ಕೋಟದಲ್ಲಿ ಕೋವಿಡ್‌ ವ್ಯಾಕ್ಸಿನ್‌ ಪಡೆಯಲು ನಿರಾಕರಿಸಿದವರ ಮನವೊಲಿಸಿದ ಬ್ರಹ್ಮಾವರ ತಹಶೀಲ್ದಾರ್‌

( Blast in the stone mining of Karkala: Two serious)

Comments are closed.