ಕೋಟ : ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯಲ್ಲಿ ಏಕಾಏಕಿ ನುಗ್ಗಿದ ಪೊಲೀಸರು ಡಿಜೆ ಹಾಗೂ ಲೈಟ್ ಆಫ್ ಮಾಡಿ, ಮದುಮಗ ಸೇರಿದಂತೆ ಸಿಕ್ಕ ಸಿಕ್ಕವರ ಮೇಲೆ ಲಾಠಿ ಚಾರ್ಜ್ ನಡೆಸಿರುವ (Mehndi Ceremony Lathi charge) ಘಟನೆ ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮದ ಕೊರಗ ಕಾಲೋನಿಯಲ್ಲಿ ನಡೆದಿದೆ. ಪೊಲೀಸರ ಅಮಾನವೀಯ ವರ್ತನೆಯ ವಿರುದ್ದ ಕೆರಳಿರುವ ಸ್ಥಳೀಯ ಮುಖಂಡರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಪ್ಪಿತಸ್ಥರ ಪೊಲೀಸರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಅಜ್ಜರಕಾಡು ಜಲ್ಲಾಸ್ಪತ್ರೆಯಲ್ಲಿ ಡಿ ದರ್ಜೆಯ ನೌಕರರಾಗಿರುವ ರಾಜೇಶ್ ಅವರ ಮದುವೆ ಕಾರ್ಯಕ್ರಮ ಡಿಸೆಂಬರ್ 29 ರಂದು ಕುಮಟಾದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 27ರಂದು ರಾತ್ರಿ ಕೋಟತಟ್ಟು ಗ್ರಾಮದ ಬಾರಿಕೆರೆಯಲ್ಲಿರುವ ತಮ್ಮ ಮನೆಯಲ್ಲಿ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ರಾತ್ರಿ 9.40ರ ಸುಮಾರಿಗೆ ಮೆಹಂದಿ ಕಾರ್ಯಕ್ರಮಕ್ಕೆ ಭೇಟಿ ಕೊಟ್ಟ ಹೆದ್ದಾರಿ ಗಸ್ತು ವಾಹನದ ಸಿಬ್ಬಂದಿ ಡಿಜೆ ಬಂದ್ ಮಾಡುವಂತೆ ಸೂಚಿಸಿದ್ದರು. ಕೇವಲ ಮನೆಯವರು ಮಾತ್ರವೇ ಇದ್ದ ಹಿನ್ನೆಲೆಯಲ್ಲಿ ಸ್ವಲ್ಪ ಹೊತ್ತಲ್ಲೇ ಕಾರ್ಯಕ್ರಮವನ್ನು ಮುಗಿಸುವುದಾಗಿಯೂ ಮನೆಯವರು ವಿನಂತಿ ಮಾಡಿಕೊಂಡಿದ್ದಾರೆ.
ಹೆದ್ದಾರಿ ಗಸ್ತು ವಾಹನದ ಸಿಬ್ಬಂದಿ ಸ್ಥಳದಿಂದ ಕೆರಳುತ್ತಿದ್ದಂತೆಯೇ 10.30 ನಿಮಿಷದ ಸುಮಾರಿಗೆ ಕೋಟ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷ್ ಬಿ.ಪಿ. ಹಾಗೂ ಸಿಬ್ಬಂದಿಗಳು ಏಕಾಏಕಿ ಮೆಹಂದಿ ನಡೆಯುತ್ತಿದ್ದ ಮನೆಗೆ ನುಗ್ಗಿದ್ದಾರೆ. ಡಿಜೆ ಹಾಗೂ ಲೈಟ್ ಬಂದ್ ಮಾಡಿ ಮದುಮಗ ಸೇರಿದಂತೆ ಸಿಕ್ಕ ಸಿಕ್ಕವರ ಮೇಲೆಲ್ಲಾ ಲಾಠಿ ಬೀಸಿದ್ದಾರೆ. ವೃದ್ದರೂ, ಮಹಿಳೆಯರೂ ಎನ್ನುವುದನ್ನೂ ನೋಡದೇ ದೌರ್ಜನ್ಯ ಎಸಗಿದ್ದಾರೆ. ಅವಾಶ್ಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೇ ಮದುಮಗ ಸೇರಿದಂತೆ ಇತರರನ್ನು ಬಟ್ಟೆ ಬಿಚ್ಚಿಸಿ ತಮ್ಮ ಜೀಪಿನಲ್ಲಿ ಕೂರಿಸಿಕೊಂಡು ಠಾಣೆಗೆ ಕರೆದೊಯ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯಲ್ಲಿ ಮದುಮಗ, ಮಹಿಳೆಯರು, ವೃದ್ದರೂ ಸೇರಿದಂತೆ ಒಟ್ಟು ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಬೆನ್ನಲ್ಲೇ ಸ್ಥಳೀಯ ಮುಖಂಡರು ಕೋಟ ಠಾಣೆಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ತಪ್ಪಿತಸ್ಥ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕೋಟ ಠಾಣಾಧಿಕಾರಿಗಳ ವಿರುದ್ದ ಈ ಹಿಂದೆಯೂ ಸಾಕಷ್ಟು ಆರೋಪ ಕೇಳಿಬಂದಿದೆ.
ಕೊರಗರು ಮುಖ್ಯವಾಹಿನಿಗೆ ಬರಬಾರದೇ ?
ಕೊರಗ ಸಮುದಾಯ ಅಭಿವೃದ್ಧಿಯಾಗಬಾರದೆ ಎಂದು ಸಮುದಾಯ ಮುಖಂಡರು ಅಳಲು ತೋಡಿಕೊಂಡಿದ್ದಾರೆ. ಈ ಪ್ರಕರಣದ ಹಿನ್ನಲ್ಲೆ ಬಗ್ಗೆ ಉಲ್ಲೇಖಿಸಿದ ಕೊರಗ ಮುಖಂಡ ಗಣೇಶ್ ಕೊರಗ ಪ್ರಸ್ತುತ ಕಾಲಘಟ್ಟದಲ್ಲಿ ಕೊರಗ ಸಮುದಾಯದ ಅಭಿವೃದ್ಧಿ ಸರಕಾರ ನಾನಾರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಅದರಂತೆ ಆರಕ್ಷರ ಮೂಲಕ ಹಲವು ಮಾಹಿತಿ ಕಾರ್ಯಕ್ರಮಗಳನ್ನು ಕೊರಗ ಕಾಲೋನಿಯಲ್ಲಿ ಆಯೋಜಿಸುತ್ತಿದೆ ಇದು ಏಕೆ ಒಂದು ಕಡೆ ಕಾರ್ಯಕ್ರಮ ಇನ್ನೊಂದು ದಿಕ್ಕಿನಲ್ಲಿ ತುಳಿದು ದೌರ್ಜನ್ಯ ಎಸೆಗುವ ಕ್ರಮ ಇದ್ಯಾವ ನ್ಯಾಯ ಕೊರಗರು ಮುಖ್ಯವಾಹಿನಿಯಲ್ಲಿ ಬಾರಬಾರದೆ ಎಂದು ಪ್ರಶ್ನಿಸಿದ್ದಾರೆ
ಪ್ರಕರಣದ ತನಿಖೆಗೆ ಸಚಿವ ಕೋಟ ಸೂಚನೆ :
ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕೊರಗ ಕಾಲೋನಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಪರವಾಗಿ ತೀವ್ರವಾಗಿ ಖಂಡಿಸುತ್ತೇನೆ ಅಲ್ಲದೆ ಈಗಾಗಲೇ ಡಿಸಿ,ಐಜಿ,ಎಸ್ ಪಿ ಯವರನ್ನು ಸಂಪರ್ಕಿಸಿ ಸಮರ್ಪಕ ತನಿಖೆ ನಡೆಸಿ ಕ್ರಮಕೈಗೊಳ್ಳಲು ಆದೇಶಿಸಿದ್ದೇನೆ,ಅನ್ಯಾಯಕ್ಕೊಳಗಾದ ಕೊರಗ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ, ಬಿಜೆಪಿ ಕಾರ್ಯಕಾರಣಿ ಸಭೆಯ ಹಿನ್ನಲ್ಲೆಯಲ್ಲಿ 30ರಂದು ಅಧಿಕಾರಿಗಳ ನೇತ್ರತ್ವದಲ್ಲಿ ಭೇಟಿ ನೀಡಿ ಸಾಂತ್ವನ ಹೇಳಲಿದ್ದೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಪಿಎಸ್‌ಐ ಸಂತೋಷ್ ಬಿ.ಪಿ.ವಿರುದ್ದ ಕ್ರಮಕ್ಕೆ ಸಾರ್ವಜನಿಕರ ಆಕ್ರೋಶ
ಸಂತೋಷ್ ಬಿ.ಪಿ. ಅವರು ಕೋಟ ಠಾಣಾಧಿಕಾರಿಯಾಗಿ ಬಂದ ದಿನದಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಅನ್ನೋ ಆರೋಪ ಕೇಳಿಬರುತ್ತಲೇ ಇದೆ. ಈ ಹಿಂದೆ ಕೋಟ ಮೆಡಿಕ ಲ್‌ನಿಂದ ಮಾತ್ರೆಯನ್ನು ತೆಗೆದುಕೊಂಡು ತಾಯಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ವೇಳೆಯಲ್ಲಿ ವಾಹನ ತಪಾಸಣೆಯ ನೆಪದಲ್ಲಿ ಯುವಕ ಹಾಗೂ ತಾಯಿಯ ಮೇಲೆಯೂ ಇದೇ ಕೋಟ ಠಾಣಾಧಿಕಾರಿ ಸಂತೋಷ್ ಹಾಗೂ ಸಿಬ್ಬಂದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ನಂತರದಲ್ಲಿ ಸಾಸ್ತಾನದಲ್ಲಿ ವ್ಯಕ್ತಿಯೋರ್ವನನ್ನು ಪೊಲೀಸ್ ವಾಹನದಲ್ಲಿ ತುಂಬಿಸಿಕೊಂಡು ದೌರ್ಜನ್ಯ ಎಸಗಿದ್ದರು. ಆದರೆ ಆ ಪ್ರಕರಣ ಅಲ್ಲಿಗೆ ತಣ್ಣಗಾಗಿತ್ತು. ಇದೀಗ ಕೊರಗ ಸಮುದಾಯದ ಮನೆಯಲ್ಲಿ ನಡೆದಿರುವ ದೌರ್ಜನ್ಯದ ವಿರುದ್ದ ಭಾರೀ ಜನಾಕ್ರೋಶ ವ್ಯಕ್ತವಾಗಿದ್ದು, ಠಾಣಾಧಿಕಾರಿ ಸೇರಿದಂತೆ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಗಳನ್ನು ಅಮಾನತ್ತು ಮಾಡುವಂತೆ ಆಗ್ರಹ ಕೇಳಿಬಂದಿದೆ. ಸಾರ್ವಜನಿಕರು ಮಾತ್ರವಲ್ಲದೇ ಕೆಲವು ವರದಿಗಾರರಿಗೂ ಠಾಣಾಧಿಕಾರಿ ಧಮಕಿ ಹಾಕಿದ್ದಾರೆನ್ನುವ ಆರೋಪವೂ ಕೇಳಿಬರುತ್ತಿದೆ. ಅಮಾಯಕರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಇದೀಗ ದೌರ್ಜನ್ಯ ಎಸಗುತ್ತಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆಯೂ ಆಗ್ರಹ ಕೇಳಿಬಂದಿದೆ.
ಇದನ್ನೂ ಓದಿ : Engineering Student Suicide : ಸುರತ್ಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಇದನ್ನೂ ಓದಿ : ನವಜಾತ ಶಿಶುಗಳಿಗೆ ವರದಾನ : ಮಂಗಳೂರಿನಲ್ಲಿ ಸ್ಥಾಪನೆ ಆಗಲಿದೆ ಹ್ಯುಮನ್ ಮಿಲ್ಕ್ ಬ್ಯಾಂಕ್
(Koraga Community Mehndi Ceremony Police Lathi charge in Kota)