Udupi Heavy Rain : ಉಡುಪಿ : ನಿರಂತರವಾಗಿ ಸುರಿಯುತ್ತಿರುವ ಪುನರ್ವಸು ಮಳೆ ಕರಾವಳಿಯಲ್ಲಿ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಕೋಟ ಸಮೀಪದ ಬನ್ನಾಡಿ, ಗಿಳಿಯಾರು, ಬ್ರಹ್ಮಾವರದ ಮಟಪಾಡಿ, ನೀಲಾವರ ಪ್ರದೇಶ ಜಲಾವೃತವಾಗಿದೆ. ಕೋಟ- ಸಾಯಿಬ್ರಕಟ್ಟೆ ಸಂಪರ್ಕ ರಸ್ತೆ ಕಡಿತವಾಗಿದೆ. ಬ್ರಹ್ಮಾವರ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಸೀತಾನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮಟಪಾಡಿ ಗ್ರಾಮ ಬಹುತೇಕ ಜಲಾವೃತವಾಗಿದೆ. ಮಟಪಾಡಿ, ನೀಲಾವರ ಸಂಪರ್ಕ ರಸ್ತೆ ಕಡಿತವಾಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಾರಕೂರು ಸುತ್ತಮುತ್ತಿನ ಪ್ರದೇಶಗಳಲ್ಲಿಯೂ ನೆರೆ ಹಾವಳಿ ಉಂಟಾಗಿದೆ. ಕೊಕ್ಕರ್ಣೆ, ನೀಲಾವರ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ನೆರೆ ಸೃಷ್ಟಿಯಾಗಿದ್ದು, ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಹೊತ್ತು ಕಳೆಯುತ್ತಿದ್ದಂತೆಯೇ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ : Gruha Lakshmi Scheme : ಗೃಹಲಕ್ಷ್ಮೀ ಯೋಜನೆ ಯಜಮಾನಿಯರಿಗೆ ಭರ್ಜರಿ ಗುಡ್‌ನ್ಯೂಸ್

ಕೋಟ ಪರಿಸರದಲ್ಲಿಯೂ ಮಳೆಯಿಂದಾಗಿ ನೂರಾರು ಎಕರೆ ಕೃಷಿಭೂಮಿ, ಮನೆಗಳು ಜಲಾವೃತವಾಗಿದೆ. ಕೋಟ ಸಾಯಿಬ್ರಕಟ್ಟೆ ಸಂಪರ್ಕ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ರಸ್ತೆಯ ಮೇಲೆ ಸುಮಾರು ಐದು ಅಡಿಗಳಿಗೂ ಅಧಿಕ ಎತ್ತರದಲ್ಲಿ ನೀರು ಹರಿಯುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ : 7ನೇ ವೇತನ ಆಯೋಗ ವರದಿ ಜಾರಿ : ಸರಕಾರಿ ನೌಕರರ ವೇತನದಲ್ಲಿ ಎಷ್ಟು ಹೆಚ್ಚಳ ? ಇಲ್ಲಿದೆ ಸಂಪೂರ್ಣ ಮಾಹಿತಿ

ಕೋಟ ಮೂರುಕೈ, ಬನ್ನಾಡಿ, ಬೆಟ್ಲಕ್ಕಿ, ಉಪ್ಲಾಡಿ, ಕಾರ್ಕಡ, ಕಾವಡಿ, ಚಿತ್ರಪಾಡಿ ಪ್ರದೇಶಗಳಲ್ಲಿ ನೆರೆ ಹಾವಳಿ ಉಂಟಾಗಿದ್ದು, ಬಹುತೇಕ ಪ್ರದೇಶಗಳು ಜಲಾವೃವಾಗಿದೆ. ಇನ್ನು ಗಿಳಿಯಾರು ಕೋಟ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಇನ್ನು ಗುಳ್ಳಾಡಿ, ತೆಕ್ಕಟ್ಟೆ, ಮಲ್ಯಾಡಿ ಪ್ರದೇಶದಲ್ಲಿಯೂ ನೆರೆ ಹಾವಳಿ ಉಂಟಾಗಿದೆ.
ಕುಂದಾಪುರ, ಬೈಂದೂರು, ಉಡುಪಿ, ಕಾರ್ಕಳ, ಹೆಬ್ರಿ, ಕಾಪು ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಉಡುಪಿ ಜಿಲ್ಲೆಯ ಜೀವ ನದಿಗಳಾದ ಸೀತಾನದಿ, ವಾರಾಹಿ, ಸ್ವರ್ಣಾ, ಪಂಚಗಂಗಾ, ಸೌಪರ್ಣಿಕಾ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಉಡುಪಿ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದ್ದರೂ ಕೂಡ ನದಿಯಲ್ಲಿ ನೀರಿ ಮಟ್ಟ ಕಡಿಮೆಯಾಗುತ್ತಿಲ್ಲ.

ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ :
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಉಡುಪಿ ಜಿಲ್ಲೆಯಲ್ಲಿ ಜುಲೈ 16 ರಂದು ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಿದ್ದು, ನಾಳೆಯೂ ಕೂಡ ಮಳೆ ಮುಂದುವರಿಯುವ ಸಾಧ್ಯತೆಯಿದೆ.
ಇದನ್ನೂ ಓದಿ : ಉಡುಪಿ, ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ : ಜುಲೈ 16 ರಂದು ಶಾಲೆಗಳಿಗೆ ರಜೆ ಘೋಷಣೆ
ಮಳೆಯ ಪ್ರಮಾಣ ತಗ್ಗಿದ್ದರೂ ಕೂಡ ತಗ್ಗು ಪ್ರದೇಶದಲ್ಲಿ ಉಂಟಾಗಿರುವ ನೆರೆಯ ಪ್ರಮಾಣ ಕಡಿಮೆಯಾಗಲು ಕನಿಷ್ಠ ಎರಡು ದಿನಗಳ ಕಾಲಾವಕಾಶದ ಅಗತ್ಯವಿದೆ. ನಾಳೆ ಸರಕಾರಿ ರಜೆ ಇರುವ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನೆರೆಹಾವಳಿಯಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.
Udupi Red Alert Heavy Rain Flood in Brahmavara Kota Matapadi Kokkarne