ಮಂಗಳೂರು : ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದಿಂದ ರಾಜ್ಯಕ್ಕೆ ಬರುವವರ ಮೇಲೆ ಹದ್ದಿನ ಕಣ್ಣು ಇರಿಸಲಾಗುತ್ತಿದ್ದು, ಕೊರೊನಾ ಟೆಸ್ಟ್ ಹಾಗೂ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.
ಕೇರಳದಲ್ಲಿ ನಿತ್ಯವೂ 4 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯಕ್ಕೆ ಬರುವ ಕೇರಳಿಗರು ಕಡ್ಡಾಯವಾಗಿ ಕೊರೊನಾ ನೆಗೆಟಿವ್ ವರದಿ ಹೊಂದಿರಲೇ ಬೇಕು. ಇನ್ನು ಕೇರಳಕ್ಕೆ ಹೋಗಿಬರುವವರು ಕೂಡ ಕ್ವಾರಂಟೈನ್ ಗೆ ಒಳಪಡಬೇಕೆಂದು ಆದೇಶಿಸಿದೆ.
ಇನ್ನು ರಾಜ್ಯಕ್ಕೆ ಆಗಮಿಸಿದ ವಿದ್ಯಾರ್ಥಿಗಳಲ್ಲಿ ಈಗಾಗಲೇ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳು ಕೂಡ ಕಡ್ಡಾಯವಾಗಿ ಕೊರೊನಾ ತಪಾಸಣೆಗೆ ಒಳಪಡಬೇಕಾಗಿದೆ. ಅಲ್ಲದೇ ಒಂದೊಮ್ಮೆ ವಿದ್ಯಾರ್ಥಿಗಳು ಪೋಷಕರನ್ನು ಭೇಟಿಯಾಗಬೇಕಾದ್ರೂ ಕೂಡ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕಾಗಿದೆ.
ಕೇರಳದಲ್ಲಿನ ಕೊರೊನಾ ಸೋಂಕು ರಾಜ್ಯಕ್ಕೆ ಹರಡುವ ಭೀತಿಯ ಹಿನ್ನೆಲೆಯಲ್ಲಿ ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕೇರಳದಿಂದ ಬರುವವರಿಗಾಗಿಯೇ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.