ಸಾಮಾಜಿಕ ಅಂತರ ಬೇಡಾ ಅಂತಿದ್ದವರಿಗೆ ಶಾಕ್ ..! ಸಣ್ಣ ಪಾರ್ಟಿಯಿಂದ 106 ಮಂದಿಗೆ ಕೊರೊನಾ, ಇಡೀ ಅಪಾರ್ಟ್ ಮೆಂಟ್ ಲಾಕ್

ಬೆಂಗಳೂರು : ಕೊರೊನಾ ಸೋಂಕು ಇಲ್ಲವೇ ಇಲ್ಲಾ, ಸಾಮಾಜಿಕ ಅಂತರ ಬೇಡಾ ಅಂತಿದ್ದವರಿಗೆ ಬೆಂಗಳೂರಲ್ಲಿ ಕೊರೊನಾ ಶಾಕ್ ಕೊಟ್ಟಿದೆ. ಸಣ್ಣ ಪಾರ್ಟಿ ಮಾಡಿದ ತಪ್ಪಿಗೆ ಇದೀಗ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ 106 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅಪಾರ್ಟ್ ಮೆಂಟ್ ಸೀಲ್ ಡೌನ್ ಮಾಡಲಾಗಿದೆ.

ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಎಸ್ಎನ್ ಎನ್ ರಾಜ್ ಲೇಕ್ ವ್ಯೂ ಅಪಾರ್ಟ್ ಮೆಂಟ್ ನಲ್ಲಿ ಇತ್ತೀಚಿಗಷ್ಟೇ ಪಾರ್ಟಿ ಮಾಡಲಾಗಿತ್ತು. ಆದರೆ ಪಾರ್ಟಿಯ ಬೆನ್ನಲ್ಲೇ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ 30ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದ್ರೀಗ ಕೊರೊನಾ ಸೋಂಕಿತರ ಸಂಖ್ಯೆ ಬರೋಬ್ಬರಿ 106ಕ್ಕೆ ಏರಿಕೆಯಾಗಿದೆ. ಹೀಗಾಗಿ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವ ಜನರಿಗೆ ದಿಗ್ಬಂಧನ ವಿಧಿಸಲಾಗಿದೆ.

ಅಪಾರ್ಟ್ ಮೆಂಟ್ ನಲ್ಲಿ ಒಟ್ಟು 1050 ಮಂದಿ ವಾಸವಾಗಿದ್ದು, ಈ ಪೈಕಿ 106 ಮಂದಿಗೆ ಈಗಾಗಲೇ ಕೊರೊನಾ ಸೋಂಕು ದೃಢಪಟ್ಟಿದೆ. ಅದ್ರಲ್ಲೂ 60 ವರ್ಷ ಮೇಲ್ಪಟ್ಟ 66 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಓರ್ವರ ಸ್ಥಿತಿ ಗಂಭೀರವಾಗಿದೆ.

ಅಪಾರ್ಟ್ ಮೆಂಟ್ ಗೆ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಭೇಟಿಯನ್ನು ನೀಡಿ, ಸೀಲ್ ಡೌನ್ ಮಾಡಲಾಗಿದೆ. ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವವರಿಗೆ ಬೇಕಾದ ಅಗತ್ಯವಸ್ತುಗಳನ್ನು ಪೂರೈಸುವ ಕಾರ್ಯವನ್ನು ಬಿಬಿಎಂಪಿ ಮಾಡುತ್ತಿದೆ. ಕೊರೊನಾ ಸೋಂಕಿಗೆ ತುತ್ತಾಗಿರುವ ಬಹುತೇಕರನ್ನು ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯ ಬೇಕಾದವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ವಿಜೇಂದ್ರ ತಿಳಿಸಿದ್ದಾರೆ.

Comments are closed.