ಬೆಂಗಳೂರು : ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ವಿಚಾರದಲ್ಲಿ ಮತ್ತೆ ಗೊಂದಲ ಉಂಟಾಗಿದೆ. ಸದ್ಯಕ್ಕೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಬದಲು ಕೇವಲ 45 ವರ್ಷ ಮೇಲ್ಪಟ್ಟ ವರಿಗೆ ಮಾತ್ರವೇ ಲಸಿಕೆ ನೀಡಲು ರಾಜ್ಯ ಸರಕಾರ ಮುಂದಾಗಿದೆ.
ರಾಜ್ಯದಲ್ಲಿ ಈಗಾಗಲೇ ಕೊರೊನಾ ಲಸಿಕೆಯ ಕೊರತೆ ಉಂಟಾಗಿದೆ. 45 ಮತ್ತು 65 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ಮೊದಲ ಡೋಸ್ ನೀಡಿದ್ದು, ಎರಡನೇ ಡೋಸ್ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಎರಡನೇ ಡೋಸ್ ನೀಡಲು ಮೊದಲು ಆಧ್ಯತೆ ನೀಡುವಂತೆ ಸಿಎಂ ಅಧಿಕಾರಿಗಳು ಹಾಗೂ ಸಚಿವರಿಗೆ ಸೂಚನೆಯನ್ನು ನೀಡಿದ್ದಾರೆ.
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸರಕಾರ ಮುಂದಾಗುತ್ತಿ ದ್ದಂತೆಯೇ ಲಕ್ಷಾಂತರ ಮಂದಿ ನೋಂದಣಿ ಮಾಡಿಕೊಂಡಿದ್ದರು. ಆದರೆ ಲಸಿಕೆ ನೀಡುವಲ್ಲಿ ಸರಕಾರ ವಿಫಲವಾಗಿತ್ತು. ಅಲ್ಲದೇ ಈಗಾಗಲೇ ಮೊದಲ ಲಸಿಕೆ ಪಡೆದು 40 ದಿನ ಕಳೆದಿದ್ದರೂ ಕೂಡ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸರಕಾರ ಎರಡನೇ ಡೋಸ್ ನೀಡಲು ಹೆಚ್ಚಿನ ಆಧ್ಯತೆ ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ. ಲಸಿಕೆ ನೀಡುವಿಕೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಹೊಸ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ.
