ಬೆಂಗಳೂರು : ಕೊರೊನಾ ರೋಗಿಗಳ ಕುರಿತು ಮಾಹಿತಿಯನ್ನು ನೀಡುವ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯವಲ್ಲ. ಈ ಕುರಿತು ಕೇಂದ್ರ ಗ್ರಹ ಸಚಿವಾಲಯ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಕೇಂದ್ರ ಸರಕಾರದ ಪರ ವಕೀಲರು ರಾಜ್ಯ ಹೈಕೋರ್ಟ್ ಗೆ ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಲೇ ಆರೋಗ್ಯ ಸೇತು ಆ್ಯಪ್ ಬಳಸುವಂತೆ ಕೇಂದ್ರ ಸರಕಾರ ಸೂಚನೆಯನ್ನು ನೀಡಿತ್ತು. ಸರಕಾರಿ ನೌಕರರು ಕಡ್ಡಾಯವಾಗಿ ಆ್ಯಪ್ ಬಳಸುವಂತೆಯೂ ಹೇಳಿತ್ತು. ಆರೋಗ್ಯ ಸೇತು ಆ್ಯಪ್ ಕೊರೊನಾ ಸೋಂಕಿತರ ಬಗ್ಗೆ ಮಾಹಿತಿಯನ್ನು ಒದಗಿಸುವ ಹಿನ್ನೆಲೆಯಲ್ಲಿ ಬಹುತೇಕರು ಆ್ಯಪ್ ಬಳಸುವುದಕ್ಕೆ ಆರಂಭಿಸಿದ್ದರು. ಆದರೆ ಈ ಕುರಿತು ಪರ ವಿರೋಧದ ಮಾತುಗಳು ಕೇಳಿಬಂದಿದ್ದವು.

ಈ ಹಿನ್ನೆಲೆಯಲ್ಲಿ ಡಿಜಿಟಲ್ ವಲಯದಲ್ಲಿನ ನಾಗರಿಕರ ಹಕ್ಕುಗಳ ರಕ್ಷಣೆಯ ಹೋರಾಟಗಾರ ಅನಿವರ್ ಅರವಿಂದ್ ಎಂಬುವವರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆಯನ್ನು ನಡೆಸಿತು.

ಈ ವೇಳೆಯಲ್ಲಿ ಆರೋಗ್ಯಸೇತು ಆ್ಯಪ್ ಬಳಕೆ ಕಡ್ಡಾಯವಲ್ಲ ಎಂಬುದನ್ನು ಈ ಹಿಂದೆಯೇ ಕೇಂದ್ರ ಸರ್ಕಾರ ಈ ಹಿಂದಿನ ವಿಚಾರಣೆ ವೇಳೆಯೇ ಕೋರ್ಟ್‌ಗೆ ಸ್ಪಷ್ಟಪಡಿಸಿದ್ದರೂ ನಂತರದ ದಿನಗಳಲ್ಲಿ ಆ್ಯಪ್ ಬಳಕೆಯನ್ನು ಕಡ್ಡಾಯಗೊಳಿಸಿತ್ತು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ವಾದ ಮಂಡಿಸಿದ್ದರು. ನ್ಯಾಯಪೀಠದ ಎದುರು ಪ್ರತಿವಾದ ಮಂಡಿಸಿದ ಕೇಂದ್ರ ಸರಕಾರದ ಪರ ವಕೀಲರು ಈ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದರು.


ಆರೋಗ್ಯ ಸೇತು ಆ್ಯಪ್ ಬಳಕೆಯನ್ನು ಕಡ್ಡಾಯಗೊಳಿಸಿ ಯಾವುದಾದರೂ ಸರ್ಕಾರಿ ಸ್ವಾಮ್ಯದ ಸಂಸ್ಥೆ ಆದೇಶ ಹೊರಡಿಸಿದ್ದರೆ ಅದರ ಪ್ರತಿಯನ್ನು ಅರ್ಜಿದಾರರು ಕೋರ್ಟ್‌ಗೆ ಸಲ್ಲಿಸಲಿ ಎಂದು ಹೇಳಿದರು. ನ್ಯಾಯಾಲು ವಿಚಾರಣೆಯನ್ನು ಜು. 17ಕ್ಕೆ ಮೂಂದೂಡಿದೆ.