ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿಂದು ಕೊರೊನಾ ಮಹಾಸ್ಪೋಟ ಸಂಭವಿಸಿದೆ. ಇಂದು ಒಂದೇ ದಿನ ಬೆಂಗಳೂರಲ್ಲಿ ಬರೋಬ್ಬರಿ 196 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ ರಾಜ್ಯದಲ್ಲಿ 453 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 9,150ಕ್ಕೆ ಏರಿಕೆಯಾಗಿದೆ.
ಕೊರೊನಾ ಸೋಂಕು ದಿನೇ ದಿನೇ ಆತಂಕವನ್ನು ತಂದೊಡ್ಡುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಕಳೆದೆರಡು ದಿನಗಳ ಕಾಲ 90ಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ರೆ, ಇಂದು ಬರೋಬ್ಬರಿ 196 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ 1,272ಕ್ಕೆ ಏರಿಕೆ ಕಂಡಿದ್ದು, ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಬೆಂಗಳೂರು ಮತ್ತೆ ಅಗ್ರಸ್ಥಾನಕ್ಕೇರಿದೆ.

ಇನ್ನು ಕಲಬುರಗಿ ಜಿಲ್ಲೆಯಲ್ಲಿ 39 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 1,199ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಬಳ್ಳಾರಿಯಲ್ಲಿ ಮತ್ತೆ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗಿದೆ ಇಂದು 40 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ವಿಜಯಪುರ 39, ಮೈಸೂರು 18, ಗದಗ 18, ಧಾರವಾಡ 15, ಬಾಗಲಕೋಟೆ 14, ಬೀದರ್ 13, ದಕ್ಷಿಣ 7, ಉತ್ತರ ಕನ್ನಡ 8, ಕೋಲಾರ 8, ಮಂಡ್ಯ 5 ಹಾಗೂ ಹಾಸನದಲ್ಲಿ 5 ಪ್ರಕರಣ ದಾಖಲಾಗಿದೆ. ತುಮಕೂರು 4, ಯಾದಗಿರಿ, ಚಿಕ್ಕಬಳ್ಳಾಪುರ ಹಾಗೂ ಹಾವೇರಿಯಲ್ಲಿ ತಲಾ 3 ಪ್ರಕರಣ ದಾಖಲಾಗಿದೆ. ರಾಯಚೂರು, ಶಿವಮೊಗ್ಗ, ರಾಮನಗರ ತಲಾ 2 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 1 ಪ್ರಕರಣ ದಾಖಲಾಗಿದೆ. ಆದರೆ ಕೊರೊನಾ ಹಾಟ್ ಸ್ಪಾಟ್ ಆಗಿದ್ದ ಯಾವುದೇ ಪ್ರಕರಣ ದಾಖಲಾಗಿಲ್ಲ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,150ಕ್ಕೆ ಏರಿಕೆಯಾಗಿದ್ದು, ಈ ಪೈಕಿ 5618 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ರೆ, 3,391 ಮಂದಿ ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾಮಾರಿ ಇದುವರೆಗೆ ರಾಜ್ಯದಲ್ಲಿ ಒಟ್ಟು 137 ಮಂದಿಯನ್ನು ಬಲಿ ಪಡೆದಿದೆ.