ಚಿಕ್ಕಮಗಳೂರು : ಕೊರೊನಾ ವೈರಸ್ ವಿರುದ್ದ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಆದ್ರೆ ಕಾಫಿನಾಡು ಚಿಕ್ಕಮಗಳೂರಲ್ಲಿ ಸರಕಾರಿ ನೌಕರರ ಹೆಸರಲ್ಲಿ ಇನ್ಯಾರೋ ಲಸಿಕೆ ಪಡೆಯುತ್ತಿದ್ದಾರೆ. ಈ ಅಕ್ರಮಕ್ಕೆ ಅಧಿಕಾರಿಗಳೇ ಸಾಥ್ ಕೊಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕೊರೊನಾ ವಾರಿಯರ್ಸ್ ಗಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಇದಕ್ಕಾಗಿ ಸರಕಾರಿ ನೌಕರರ ಪಟ್ಟಿಯನ್ನು ಸಿದ್ದಪಡಿಸಿರುವ ಆರೋಗ್ಯ ಇಲಾಖೆ ನಿತ್ಯವೂ ಒಂದೊಂದು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳಿಗೆ ಲಸಿಕೆ ನೀಡುವ ಕಾರ್ಯವನ್ನು ಮಾಡುತ್ತಿದೆ. ಆದ್ರೆ ಮೂಡಿಗೆರೆ ತಾಲೂಕಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ಹೆಸರಲ್ಲಿ ಬೇರೆಯವರಿಗೆ ಲಸಿಕೆ ನೀಡಿರುವ ವಿಚಾರ ಸದ್ಯ ವಿವಾದಕ್ಕೆ ಕಾರಣವಾಗಿದೆ. ಅದ್ರಲ್ಲೂ ಇಲಾಖೆಯ ಸಿಬ್ಬಂದಿಗಳಲ್ಲದವರಿಗೆ ಲಸಿಕೆ ನೀಡಲು ಆರ್ ಎಫ್ ಓ ಸಾತ್ ಕೊಟ್ಟಿರುವ ಆರೋಪ ಕೇಳಿಬಂದಿದೆ.

ಮೂಡಿಗೆರೆ ತಾಲೂಕಿನ ಅರಣ್ಯ ಇಲಾಖೆಯಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗಿದೆ. ಈ ವೇಳೆಯಲ್ಲಿ ಇಲಾಖೆಯ ಸಿಬ್ಬಂಧಿ ಅಲ್ಲದಿದ್ದರೂ ಕೆ.ಎನ್.ಸೋಮಶೇಖರ್ ಎಂಬ ವ್ಯಕ್ತಿಗೆ ಲಸಿಕೆ ನೀಡಲಾಗಿದೆ, ಸೋಮಶೇಖರ್ ಗೆ ಮೂಡಿಗೆರೆ ಆರ್.ಎಫ್.ಓ. ತಮ್ಮ ಸಿಬ್ಬಂದಿ ಎಂದು ಇಲಾಖೆಯಿಂದ ಅಧಿಕೃತ ಲೆಟರ್ ಕೊಟ್ಟಿದ್ದಾರೆ. ಅಲ್ಲದೇ ಆರೋಗ್ಯ ಇಲಾಖೆಗೆ ನೀಡಿರುವ ವ್ಯಾಕ್ಸಿನ್ ಪಟ್ಟಿಯಲ್ಲಿಯೂ ಈ ವ್ಯಕ್ತಿಯ ಹೆಸರಿತ್ತು. ಹೀಗಾಗಿ ಈ ಕುರಿತು ತಹಶೀಲ್ದಾರ್ ರಿಗೆ ದೂರು ನೀಡಲಾಗಿದೆ. ಸ್ಥಳೀಯರ ದೂರಿನ ಅನ್ವಯ ತಹಶೀಲ್ದಾರ್ ಕೂಡ ಕಾರಣ ಕೇಳಿ ಆರ್.ಎಫ್.ಓಗೆ ನೋಟಿಸ್ ಜಾರಿ ಮಾಡಿದ್ದಾರೆ.

ಇನ್ನು ಸೋಮಶೇಖರ್ ಅರಣ್ಯ ಇಲಾಖೆಯ ಸಿಬ್ಬಂದಿಯ ಪತಿ ಅನ್ನೋದು ತಿಳಿದುಬಂದಿದ್ದು, ಈ ಕುರಿತು ಡಿಸಿ ಹಾಗೂ ಎಸ್ಪಿಗೂ ದೂರು ನೀಡಲು ಸ್ಥಳೀಯರು ಮುಂದಾಗಿದ್ದು, ವ್ಯಾಕ್ಸಿನ್ ಅಕ್ರಮದ ತನಿಖೆಗೆ ಒತ್ತಾಯ ಕೇಳಿಬಂದಿದೆ.
