ಚಿರು ಎಂಬ ನಕ್ಷತ್ರ ಮರೆಯಾಗಿ ಇಂದಿಗೆ ಒಂದು ವರ್ಷ….! ಇಲ್ಲಿದೆ ಯುವಸಾಮ್ರಾಟ್ ನ ಬದುಕಿನ ಪುಟ…!!

ನಟನೆಯ ಹಿನ್ನೆಲೆಯುಳ್ಳ ಕುಟುಂಬದಲ್ಲೇ ಹುಟ್ಟಿ, ನಟನಾಗುವ ಕನಸು ಕಂಡು ಕನಸನ್ನು ನನಸಾಗಿಸಿಕೊಳ್ಳುತ್ತ ಸಾಗುತ್ತಿದ್ದಾಗಲೇ ದೀಢೀರ್ ಮರೆಯಾದ ನಕ್ಷತ್ರ ಚಿರಂಜೀವಿ ಸರ್ಜಾ. ಅಜಾತ ಶತ್ರುವಂತೆ ಬದುಕಿದ ಚಿರು ಬದುಕಿನ ಅನಾವರಣ ಇಲ್ಲಿದೆ.

ಖ್ಯಾತ ನಟ ಶಕ್ತಿಪ್ರಸಾದ್ ಮೊಮ್ಮಗನಾಗಿ 1984 ಅಕ್ಟೋಬರ್ 17 ರಂದು ಬೆಂಗಳೂರಿನ ಯಡಿಯೂರಿನಲ್ಲಿ ಜನಿಸಿದ ಚಿರು ಬಾಲ್ಯದಿಂದಲೂ ಸ್ನೇಹಜೀವಿ. ಸದಾ ಪ್ರೀತಿ,ನಗು ತುಂಬಿದ ಪ್ರಭಾವಲಯವನ್ನೇ ಸೃಷ್ಟಿಸುತ್ತಿದ್ದ ಕನಸುಗಾರ.

ಬೆಂಗಳೂರಿನ ಬಾಲ್ಡ್ವಿನ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಚಿರು, ವಿಜಯಾ ಕಾಲೇಜಿನಲ್ಲಿ ಪದವಿ ಪಡೆದರು. ಬಳಿಕ ಮಾವ ಹಾಗೂ ಖ್ಯಾತ ನಟ ಅರ್ಜುನ್ ಸರ್ಜಾ ಬಳಿ ಸಹಾಯಕ ನಿರ್ದೇಶಕರಾಗಿ 2005 ರಲ್ಲಿ ಸ್ಯಾಂಡಲ್ ವುಡ್ ಪ್ರವೇಶಿಸಿದರು.

ನಾಲ್ಕು ವರ್ಷಗಳ ಕಾಲ ಸಹಾಯಕ ನಿರ್ದೇಶಕನಾಗಿ ದುಡಿದ ಚಿರು, 2009 ರಲ್ಲಿ ಮೊದಲ ಬಾರಿಗೆ ನಟನಾಗಿ ಅದೃಷ್ಟ ಪರೀಕ್ಷೆಗೆ ಮುಂದಾದರು. ವಾಯುಪುತ್ರ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಚಿರು, ಅಂಬರೀಶ್ ಸೇರಿದಂತೆ ಹಲವು ಹಿರಿಯ ನಟರ ಜೊತೆ ನಟಿಸಿದ್ದಾರೆ.

ಚಿರು ಸಿನಿಮಾ ಚಿರಂಜೀವಿ ಸರ್ಜಾ ಸಿನಿಮಾ ಕೆರಿಯರ್ ನಲ್ಲಿ ಹೊಸ ತಿರುವು ತಂದುಕೊಟ್ಟಿತು. ದಂಡದಶಗುಣ,ಕೆಂಪೇಗೌಡ,ವರದನಾಯಕ,ಆಟಗಾರ,ರಾಮಲೀಲಾ ಸೇರಿದಂತೆ 22 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಚಿರು, ಅಗಲುವ ಮುನ್ನ ಮೂರಕ್ಕೂ ಹೆಚ್ಚು ಸಿನಿಮಾಗಳು ತೆರೆಗೆ ಬರಲು ಕಾದಿದ್ದವು.

10 ವರ್ಷಗಳ ಕಾಲ ಪ್ರೀತಿಸಿದ ಮೇಘನಾ ರಾಜ್ ಜೊತೆ 2017 ರಲ್ಲಿ ಅದ್ದೂರಿ ನಿಶ್ಚಿತಾರ್ಥ ಮಾಡಿಕೊಂಡ ಚಿರು, 2018 ಮೇ 2 ರಂದು ವಿವಾಹವಾಗಿದ್ದರು. ಆದರೆ ಮದುವೆಯಾಗಿ ಎರಡು ವರ್ಷ ಕಳೆದು ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾಗಲೇ ಚಿರು ಇನ್ನಿಲ್ಲವಾಗಿ ಹೋಗಿದ್ದಾರೆ.

ಚಿರು ಸಾವಿಗೆ ಕೆಲವೇ ದಿನಗಳ ಮೊದಲು ಅವರ ಬಹುನೀರಿಕ್ಷಿತ ಚಿತ್ರ ಶಿವಾರ್ಜುನ ತೆರೆಕಂಡಿತ್ತು. ಸಿನಿಮಾ ರಿಲೀಸ್ ಆದ ಕೆಲವೇ ದಿನದಲ್ಲಿ ಲಾಕ್ ಡೌನ್ ಜಾರಿಯಾಗಿದ್ದರಿಂದ ಸಿನಿಮಾ ಗೆಲ್ಲಲಿಲ್ಲ. ಜೂನ್ 7, 2020 ರಂದು ತೀವ್ರ ಹೃದಯಾಘಾತಕ್ಕೆ ತುತ್ತಾದ ಚಿರು , 35 ವರ್ಷಕ್ಕೆ ಮೆಚ್ಚಿನ ಮಡದಿ, ಹೆತ್ತವರು, ಸಹೋದರ ಹಾಗೂ ಅಪಾರ ಅಭಿಮಾನಿ ವರ್ಗವನ್ನು ಅಗಲಿ ಹೋಗಿದ್ದಾರೆ.  

Comments are closed.