ಬೆಂಗಳೂರು : ಕೊರೊನಾ ಮಹಾಮಾರಿಯ ವಿರುದ್ದದ ಹೋರಾಟಕ್ಕೆ ರಾಜ್ಯ ಸಜ್ಜಾಗಿದೆ. ಕೋವಿಡ್ ಸೋಂಕಿತರಿಗೆ ಹಾಸಿಗೆಯ ಕೊರತೆ ಎದುರಾಗುತ್ತಿದ್ದಂತೆಯೇ ಬೆಂಗಳೂರಲ್ಲಿ ದೇಶದಲ್ಲಿಯೇ ಅತೀ ದೊಡ್ಡ ಕೊರೊನಾ ಸೆಂಟರ್ ನಿರ್ಮಾಣ ಮಾಡಿದ್ದು, ಇನ್ನೊಂದು ವಾರದಲ್ಲಿ ಕಾರ್ಯಾರಂಭ ಮಾಡಲಿದೆ.

ತುಮಕೂರು ರಸ್ತೆಯ ನೆಲಮಂಗಲದ ಬಳಿಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರವನ್ನು ಇದೀಗ 10,100 ಹಾಸಿಗೆಗಳ ಸಾಮರ್ಥ್ಯದ ಕರೊನಾ ಕೇರ್ ಸೆಂಟರ್ ಪರಿವರ್ತನೆ ಮಾಡಲಾಗಿದೆ.

ಈ ಬೃಹತ್ ಕೋವಿಡ್ ಕೇರ್ ಸೆಂಟರ್ನಲ್ಲಿ 100-200 ಜನರಿಗೆ ಒಬ್ಬ ವೈದ್ಯರಂತೆ ಸುಮಾರು 600 ವೈದ್ಯರು, 1,000 ನರ್ಸ್‌ಗಳು ಸೇರಿದಂತೆ ಆರೋಗ್ಯ ಸಿಬ್ಬಂದಿಗಳ ಅಗತ್ಯದಿದ್ದು, ರಾಜ್ಯ ಸರಕಾರ ಈಗಾಗಲೇ ಬೃಹತ್ ಕೊರೊನಾ ಕೇರ್ ಸೆಂಟರ್ ಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.

ಕೊರೊನಾ ಸೋಂಕಿತರಿಗಾಗಿ ಒಟ್ಟು ಐದು ಹಾಲ್ಗಳಲ್ಲಿ ಹಾಸಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ನಿತ್ಯವೂ ಬೆಳಗ್ಗೆ ತಿಂಡಿ, ಸ್ನ್ಯಾಕ್ಸ್, ಊಟ, ಮನರಂಜನೆಯ ಜೊತೆ ಜೊತೆಗೆ ಯೋಗ ಮಾಡುವುದಕ್ಕೂ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ.

ಕೇವಲ ಬೆಂಗಳೂರು ಮಾತ್ರವಲ್ಲದೇ ಇತರ ಕಡೆಗಳಲ್ಲಿಯೂ ಬೆಡ್ ಗಳ ಕೊರತೆಯಾದಾಗ ಇದೇ ಕೊರೊನಾ ಕೇರ್ ಸೆಂಟರ್ ಗೆ ತಂದು ಚಿಕಿತ್ಸೆಯನ್ನು ನೀಡಲಾಗುತ್ತದೆ.

ನೆಲಮಂಗದಲ್ಲಿ ನಿರ್ಮಾಣಗೊಂಡಿರುವ ಬೃಹತ್ ಕೊರೊನಾ ಸೆಂಟರ್ ದೇಶದಲ್ಲಿಯೇ ಅತ್ಯಂತ ದೊಡ್ಡ ಕೊರೊನಾ ಸೆಂಟರ್ ಅನ್ನುವ ಖ್ಯಾತಿಗೆ ಪಾತ್ರವಾಗಲಿದ್ದು, ಇನ್ನೊಂದು ವಾರದಲ್ಲಿ ಕಾರ್ಯಾರಂಭ ಮಾಡಲಿದೆ.

ಬೃಹತ್ ಕೋವಿಡ್ ಕೇರ್ ಸೆಂಟರ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಬಸವರಾಜ ಬೊಮ್ಮಾಯಿ, ಡಾ.ಕೆ. ಸುಧಾಕರ್, ಬಿ. ಶ್ರೀರಾಮುಲು, ಆರ್. ಅಶೋಕ್, ಶಾಸಕ ಎಸ್.ಆರ್. ವಿಶ್ವನಾಥ್ ಮುಂತಾದವರು ಭೇಟಿಕೊಟ್ಟು ಪರಿಶೀಲನೆಯನ್ನು ನಡೆಸಿದ್ದಾರೆ.