ಬೆಂಗಳೂರು : ರಾಜ್ಯದಲ್ಲಿ ಎಂತಹ ಪರಿಸ್ಥಿತಿಯಲ್ಲಿಯೂ ಕೂಡ ಲಾಕ್ ಡೌನ್ ಹೇರಿಕೆಯನ್ನು ಮಾಡುವುದಿಲ್ಲ. ಕೊರೊನಾ ಜೊತೆ ಜೊತೆಗೆ ಅಭಿವೃದ್ದಿಯನ್ನೂ ರಾಜ್ಯ ಸರಕಾರ ಮಾಡಲಿದೆ. ಲಾಕ್ ಡೌನ್ ಆದೇಶದ ಕುರಿತು ಯಾವುದೇ ಗೊಂದಲಗಳು ಬೇಡ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆಸ ಸರ್ವಪಕ್ಷ ಸಭೆಯಲ್ಲಿ ಪ್ರತಿಪಕ್ಷ ನಾಯಕರು ಕುಡ ಪಾಲ್ಗೊಂಡು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಅವರ ಸಲಹೆಗಳನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೇ ಸಲಹೆಗಳನ್ನು ಜಾರಿಗೆ ತರಲಾಗುವುದು ಎಂದಿದ್ದಾರೆ. ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆಯಿದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿನ ಶೇ.50 ಬೆಡ್ ಗಳನ್ನು ಕೊರೊನಾ ಸೋಂಕಿತರಿಗಾಗಿಯೇ ಮೀಸಲಿಡುವಂತೆ ಸೂಚನೆಯನ್ನು ನೀಡಲಾಗಿದೆ.

ಬೆಂಗಳೂರಲ್ಲಿ ನಿತ್ಯವೂ 7,500 ಮಂದಿಗೆ ತಪಾಸಣೆ
ರಾಜ್ಯದಲ್ಲಿ ಇದುವರೆಗೆ 5.53 ಲಕ್ಷ ಜನರಿಗೆ ಕೊರೊನಾ ತಪಾಸಣೆಯನ್ನು ನಡೆಸಲಾಗಿದ್ದು, ನಿತ್ಯವೂ 4,000 ಮಂದಿಗೆ ಕೊರೊನಾ ತಪಾಸಣೆಯನ್ನು ನಡೆಸಲಾಗುತ್ತಿದ್ದು, ಇನ್ಮುಂದೆ ನಿತ್ಯವೂ 7,500 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗುವುದು ಸಿಎಂ ನೇತೃತ್ವದಲ್ಲಿ ನಡೆಸ ಸರ್ವ ಪಕ್ಷ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅಶೋಕ್ ತಿಳಿಸಿದ್ದಾರೆ.

ಬೆಡ್ ವ್ಯವಸ್ಥೆಗೆ ನೋಡಲ್ ಅಧಿಕಾರಿ
ಕೊರೊನಾ ರೋಗಿಗಳಿಗೆ ಬೆಡ್ ಕೊರತೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಬೆಡ್ ಗಳ ಲಭ್ಯತೆಯ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.

ಆಸ್ಪತ್ರೆಗಳ ಅವ್ಯವಸ್ಥೆಯನ್ನು ಪರಿಶೀಲಿಸುವಂತೆ ಶಾಸಕರಿಗೆ ಸೂಚನೆಯನ್ನು ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಕಂಡು ಬಂದರೆ ಕೂಡಲೇ ಸರಕಾರದ ಗಮನಕ್ಕೆ ತರುವಂತೆಯೂ ತಿಳಿಸಲಾಗಿದೆ ಎಂದು ಅಶೋಕ್ ಹೇಳಿದ್ದಾರೆ.