ಬೆಂಗಳೂರು : ಕೊರೊನಾ ಮಹಾಮಾರಿ ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಇಂದು ಒಂದೇ ದಿನ 28 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಒಂದೇ ದಿನ ಬರೋಬ್ಬರಿ 21 ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಮಾತ್ರವಲ್ಲ ಹಸಿರು ವಲಯದಲ್ಲಿರುವ ಹಾವೇರಿಗೂ ಮಹಾಮಾರಿ ಒಕ್ಕರಿಸಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 642ಕ್ಕೆ ಏರಿಕೆಯಾಗಿದೆ.

ದಾವಣೆಗೆರೆಯ ರೋಗಿ ಸಂಖ್ಯೆ 533ರ ಸಂಪರ್ಕದಿಂದಾಗಿ ಒಂದೇ ದಿನ 21 ಮಂದಿಗೆ ಕೊರೊನಾ ಸೋಂಕು ಹರಡಿದೆ. ದಾವಣಗೆರೆಯಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರೋದು ಜಿಲ್ಲಾಡಳಿತದ ಆತಂಕಕ್ಕೆ ಕಾರಣವಾಗಿದೆ.

ಕೊರೊನಾ ಸೋಂಕಿತರ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಇನ್ನು ಹಸಿರು ಝೋನ್ ನಲ್ಲಿದ್ದ ಹಾವೇರಿಗೂ ಕೊರೊನಾ ಸೋಂಕು ವ್ಯಾಪಿಸಿದೆ. ಮುಂಬೈನಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.


ಚಿಕ್ಕಬಳ್ಳಾಪುರದ 30 ವರ್ಷದ ವ್ಯಕ್ತಿ, ಮಂಡ್ಯ ಜಿಲ್ಲೆಯ 20 ಹಾಗೂ 19 ವರ್ಷದ ಯುವತಿಯರಲ್ಲಿ ಸೋಂಕು ದೃಢಪಟ್ಟಿದ್ದರೆ, ವಿಜಯಪುರದ 288ನೇ ರೋಗಿಯ ದ್ವಿತೀಯ ಸಂಪರ್ಕದ 62 ವರ್ಷದ ವೃದ್ಧೆ, ಕಲಬುರಗಿಯ 36 ವರ್ಷದ ಮಹಿಳೆ ಮತ್ತು ಚಿಂಚೋಳಿಯ 37 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಕಲಬುರಗಿಯಲ್ಲಿ 56 ವರ್ಷದ ಕೊರೊನಾ ಸೋಂಕಿತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಇದೀಗ 27ಕ್ಕೆ ಏರಿಕೆಯಾಗಿದೆ. ಇದುವರೆಗೆ ರಾಜ್ಯದಲ್ಲಿ 304 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.