ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು : ಉಡುಪಿ, ದಕ್ಷಿಣ ಕನ್ನಡದಲ್ಲಿ ಶುರುವಾಗಿದೆ ಆತಂಕ !

0

ಮಂಗಳೂರು : ಕೊರೊನಾ ಮಹಾಮಾರಿ ಮಹಾರಾಷ್ಟ್ರದಲ್ಲಿ ಅಬ್ಬರಿಸುತ್ತಿದೆ. ಕಳೆದೊಂದು ವಾರದಿಂದಲೂ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರೋದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರಿಗೆ ಆತಂಕ ಶುರುವಾಗಿದೆ. ಅದ್ರಲ್ಲೂ ಹೊರ ರಾಜ್ಯಗಳ ಸಂಚಾರಕ್ಕೆ ಕೇಂದ್ರ ಸರಕಾರ ಅವಕಾಶ ಕಲ್ಪಿಸಿರುವುದು ಅವಳಿ ಜಿಲ್ಲೆಗಳ ಜನರಿಗೆ ಹೊಸ ತಲೆನೋವು ತರಿಸಿದೆ.

ಕರ್ನಾಟಕ ಕರಾವಳಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಕೊರೊನಾ ಮಹಾಮಾರಿಯಿಂದ ತತ್ತರಿಸಿವೆ. ಉಡುಪಿ ಜಿಲ್ಲೆಯಲ್ಲಿ ಆರಂಭದಲ್ಲಿ 3 ಮಂದಿಗೆ ಕೊರೊನಾ ಸೋಂಕು ವ್ಯಾಪಿಸಿತ್ತು. ಆದರೆ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಲಾಕ್ ಡೌನ್ ಆದೇಶ ಪಾಲನೆ ಮಾಡಿರೋದ್ರಿಂದಾಗಿ ಜಿಲ್ಲೆ ಕೊರೊನಾ ಮುಕ್ತವಾಗಿದೆ.

ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದಲೂ ಯಾವುದೇ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿಲ್ಲ. ಉಡುಪಿ ಜಿಲ್ಲೆ ಗ್ರೀನ್ ಝೋನ್ ವ್ಯಾಪ್ತಿಯಲ್ಲಿದ್ದರೂ ಕೂಡ ಜಿಲ್ಲೆಯಲ್ಲಿ ಇಂದಿಗೂ ಕಟ್ಟಿನಿಟ್ಟಿನ ಆದೇಶ ಪಾಲಿಸಲಾಗುತ್ತಿದೆ.

ಇನ್ನೊಂದೆಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ಆರ್ಭಟ ಜೋರಾಗಿದೆ. ಜಿಲ್ಲೆಯಲ್ಲಿ ಡೆಡ್ಲಿ ಮಹಾಮಾರಿಗೆ ಈಗಾಗಲೇ ಮೂರು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 20ಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಜಿಲ್ಲೆಯ ಹಲವು ಭಾಗಗಳನ್ನು ಸೀಲ್ ಡೌನ್ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದ್ರೂ ಎರಡೂ ಜಿಲ್ಲೆಯ ಜನರಿಗೆ ಇದೀಗ ಭಯ ಹುಟ್ಟಿಸಿರೋದು ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವುದು.

ಹೌದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಲಕ್ಷಾಂತರ ನಿವಾಸಿಗಳು ಇದೀಗ ಮುಂಬೈ, ಮಹಾರಾಷ್ಟ್ರದಲ್ಲಿ ನೆಲೆಕಂಡುಕೊಂಡಿದ್ದಾರೆ. ಆದ್ರೆ ಮಹಾರಾಷ್ಟ್ರದಲ್ಲಿ ದೇಶದಲ್ಲಿಯೇ ಅತೀ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ದೇಶದಾದ್ಯಂತ 43,555 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ಮಹಾರಾಷ್ಟ್ರವೊಂದರಲ್ಲಿಯೇ ಬರೋಬ್ಬರಿ 12,296 ಮಂದಿಗೆ ಮಹಾಮಾರಿ ವ್ಯಾಪಿಸಿದೆ. ಅದ್ರಲ್ಲೂ 521 ಮಂದಿ ಡೆಡ್ಲಿ ಮಹಾಮಾರಿಗೆ ಬಲಿಯಾಗಿ ಹೋಗಿದ್ದಾರೆ.

ಇನ್ನು ಕಳೆದ ಮೂರು ದಿನಗಳಲ್ಲಿಯೇ ಬರೋಬ್ಬರಿ 2,500ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ಬಾಧಿಸಿದೆ. ಅಲ್ಲದೇ ಹಲವರು ಶಂಕಿತ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ದಿನೇ ದಿನೇ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಲೇ ಇದೆ. ಕರ್ನಾಟಕದ ಹಲವು ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ.

ಇದೀಗ ಕೇಂದ್ರ ಸರಕಾರ ಅಂತರ್ ರಾಜ್ಯ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಹೀಗಾಗಿ ಮುಂಬೈ, ಮಹಾರಾಷ್ಟ್ರದಲ್ಲಿ ನೆಲೆಸಿರುವ ಕರಾವಳಿಗರು ಇದೀಗ ಊರಿನ ಕಡೆಗೆ ಮುಖ ಮಾಡೋದು ಗ್ಯಾರಂಟಿ. ಅದ್ರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರೋ ಬೆನ್ನಲ್ಲೇ ಸಾವಿರಾರು ಮಂದಿ ತಮ್ಮೂರಿಗೆ ಮರಳು ರಾಜ್ಯ ಸರಕಾರಕ್ಕೆ ಅವಕಾಶ ಕಲ್ಪಿಸುವಂತೆ ವಿನಂತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತಗಳು ಚಿಂತನೆ ನಡೆಸಿವೆ.

ಮುಂಬೈನಿಂದ ಆಗಮಿಸುವವರನ್ನು ಹೋಮ್ ಕ್ವಾರಂಟೈನ್ ಬದಲು ಸರಕಾರಿ ಕ್ವಾರಂಟೈನ್ ನಲ್ಲಿ ಇರಿಸಲು ಚಿಂತನೆ ನಡೆಸಲಾಗುತ್ತಿದೆ. ಆನ್ ಲೈನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸರಕಾರಗಳು ಸೂಚನೆಯನ್ನು ನೀಡಿವೆ. ಆದರೆ ಮಹಾರಾಷ್ಟ್ರ ಸರಕಾರ ತನ್ನ ರಾಜ್ಯದೊಳಗೆ ಬರುವುದಕ್ಕೆ ಹಾಗೂ ಹೊರ ಹೋಗುವುದಕ್ಕೆ ಅವಕಾಶವೇ ಇಲ್ಲಾ ಎಂದಿದೆ.

ಒಂದೊಮ್ಮೆ ಮಹಾರಾಷ್ಟ್ರ ಸರಕಾರ ಮನಸ್ಸು ಬದಲಾಯಿಸಿದ್ರೆ ಕರ್ನಾಟಕದ ಜನರ ರಾಜ್ಯಕ್ಕೆ ಮರಳುವುದು ಗ್ಯಾರಂಟಿ. ಜಿಲ್ಲಾಡಳಿತಗಳು ಗಡಿಯಲ್ಲಿಯೇ ತಪಾಸಣೆ ನಡೆಸಲು ಸಿದ್ದತೆಗಳನ್ನು ಮಾಡಿಕೊಂಡಿವೆ. ಆದರೆ ಯಾವುದಾದರೂ ಜಿಲ್ಲಾಡಳಿತ ಕಣ್ಣು ತಪ್ಪಿಸಿ ಬರುತ್ತಾರೋ ಅನ್ನೋ ಆತಂಕ ಇದೀಗ ಜಿಲ್ಲೆಯ ಜನರನ್ನು ಕಾಡುತ್ತಿದೆ.

ಹೊರ ರಾಜ್ಯದವರಿಗೆ ಕಡ್ಡಾಯ ಕ್ವಾರಂಟೈನ್ !
ಉಡುಪಿ ಜಿಲ್ಲಾಡಳಿತ ಈಗಾಗಲೇ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸುವವರಿಗೆ ಕ್ವಾರಂಟೈನ್ ಮಾಡಿಸೋದಾಗಿ ಹೇಳಿದೆ. ಈಗಾಗಲೇ ಹೊರ ಜಿಲ್ಲೆಗಳಿಂದ ಬರುತ್ತಿರುವವರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದವರನ್ನು ಗಡಿಯಲ್ಲಿಯೇ ತಪಾಸಣೆ ನಡೆಸಿ, ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ಆದರೆ ಹೊರ ರಾಜ್ಯಗಳಿಂದ ಆಗಮಿಸುವವರನ್ನು ಕಡ್ಡಾಯವಾಗಿ ಸರಕಾರಿ ಕ್ವಾರಂಟೈನ್ ಮಾಡುವುದಾಗಿ ಹೇಳಿದ್ದಾರೆ. ಕ್ವಾರಂಟೈನ್ ಗೆ ಒಳಪಡುವವರು ಮಾತ್ರವೇ ಜಿಲ್ಲೆಗೆ ಬನ್ನಿ ಅಂತಾ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ತಿಳಿಸಿದ್ದಾರೆ.

ಹೊರ ರಾಜ್ಯಗಳಲ್ಲಿ ನೆಲೆಸಿರುವವರನ್ನು ರಾಜ್ಯದೊಳಗೆ ಕರೆಯಿಸಿಕೊಳ್ಳುವಾಗ ಕಡ್ಡಾಯವಾಗಿ ಕೊರೊನಾ ನಿಯಮಗಳನ್ನು ಪಾಲಿಸಲೇ ಬೇಕಿದೆ. ಗಡಿಭಾಗಗಳಲ್ಲಿಯೇ ಕಡ್ಡಾಯವಾಗಿ ತಪಾಸಣೆ ನಡೆಸಿ ಕೊರೊನಾ ಬಾರದಂತೆ ಎಚ್ಚರಿಕೆವಹಿಸಬೇಕಿದೆ. ಜಿಲ್ಲಾಡಳಿತಗಳ ಕಾರ್ಯಕ್ಕೆ ಹೊರ ಜಿಲ್ಲೆಗಳಿಂದ ಬರುವವರು ಹಾಗೂ ಜಿಲ್ಲೆಯ ನಿವಾಸಿಗಳು ಕೂಡ ಬೆಂಬಲ ನೀಡಬೇಕಿದೆ. ಎರಡು ಅವಧಿಯ ಲಾಕ್ ಡೌನ್ ಮುಗಿಸಿ ನಿರಾಳರಾಗಿರೋ ಜನತೆ ಕೊಂಚ ಯಾಮಾರಿದ್ರೂ ಕೊರೊನಾ ಮಹಾಮಾರಿ ಮತ್ತೆ ಅಟ್ಟಹಾಸವನ್ನು ಮೆರೆಯಲಿದೆ. ಈ ನಿಟ್ಟಿನಲ್ಲಿ ಪ್ರತೀಯೊಬ್ಬ ನಿವಾಸಿಗಳು ಎಚ್ಚರವಹಿಸಲೇ ಬೇಕಿದೆ.

Leave A Reply

Your email address will not be published.