Coronavirus Third Wave :ಕೊರೊನಾ ಪ್ರಪಂಚಕ್ಕೆ ಬಂದಪ್ಪಳಿಸಿ ಎರಡು ವರ್ಷಗಳೇ ಕಳೆದರೂ ಸಹ ಈ ಮಹಾಮಾರಿ ಮಾತ್ರ ಯಾಕೋ ಪ್ರಪಂಚವನ್ನು ಬಿಟ್ಟು ಹೋಗುವಂತೆ ಕಾಣುತ್ತಿಲ್ಲ. ಸಾಕಷ್ಟು ಮುಂಜಾಗ್ರತಾ ಕ್ರಮ, ಲಸಿಕೆಗಳನ್ನು ಬಳಕೆ ಮಾಡಲಾಗುತ್ತಿದೆಯಾದರೂ ಕೊರೊನಾ ರೂಪಾಂತರಿಗಳ ಸೃಷ್ಟಿಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಹಾಮಾರಿ ಕೊರೊನಾ ಈಗಲೂ ಜನತೆಯ ಪಾಲಿಗೆ ಸಿಂಹ ಸ್ವಪ್ನವಾಗಿಯೇ ಉಳಿದಿದೆ.
ಆಫ್ರಿಕಾದಲ್ಲಿ ಜನ್ಮ ತಾಳಿದ ಓಮಿಕ್ರಾನ್ ರೂಪಾಂತರಿ ಇದೀಗ ಪ್ರಪಂಚದಾದ್ಯಂತ ತನ್ನ ಕಬಂಧ ಬಾಹುವನ್ನು ಚಾಚಿ ಬಿಟ್ಟಿದೆ. ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 4 ಸಾವಿರದ ಗಡಿ ದಾಟಿದೆ. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂಗಳಂತಹ ವಿವಿಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಸಹ ದೈನಂದಿನ ಸೋಂಕಿನ ಸಂಖ್ಯೆಯಲ್ಲಿ ಯಾವುದೇ ಇಳಿಕೆ ಕಂಡು ಬರುತ್ತಿಲ್ಲ. ಒಂದೆಡೆ ಇನ್ನೂ ಮುಗಿಯದ ಡೆಲ್ಟಾ ರೂಪಾಂತರಿ, ಮತ್ತೊಂದೆಡೆ ಹೊಸದಾಗಿ ಶುರುವಾದ ಓಮಿಕ್ರಾನ್ ತಳಿ ಇವೆರಡರಿಂದ ದೇಶದಲ್ಲಿ ಪ್ರತಿ ದಿನ ಲಕ್ಷಕ್ಕೂ ಮೀರಿ ಕೊರೊನಾ ಪ್ರಕರಣಗಳು ವರದಿಯಾಗುತ್ತಿದೆ.
ಕೊರೊನಾ ಎರಡನೆ ಅಲೆಯಲ್ಲಿ ವಯಸ್ಕರು ಹೆಚ್ಚಾಗಿ ಬಲಿಯಾಗಿದ್ದರು. ಭೀಕರ ಕೋಲಾಹಲವನ್ನೇ ಸೃಷ್ಟಿಸಿದ್ದ ಕೊರೊನಾ ಎರಡನೇ ಅಲೆಯು ಅನೇಕ ವಯಸ್ಕರ ಪ್ರಾಣ ಪಕ್ಷಿಯನ್ನು ಹಾರಿಸಿತ್ತು. ಇದೀಗ ಬಂದಿರುವ ಓಮಿಕ್ರಾನ್ ರೂಪಾಂತರಿಯು ಮೂರನೇ ಅಲೆಗೆ ಕಾರಣವಾಗುತ್ತದೆಯೆಂದೂ ನಾವೀಗ ಮೂರನೇ ಅಲೆಯ ಹೊಸ್ತಿಲಲ್ಲಿ ಇದ್ದೇವೆ ಎಂದು ತಜ್ಞರು ಹೇಳುತ್ತಿದ್ದಾರೆ.
ಓಮಿಕ್ರಾನ್ ರೂಪಾಂತರಿಯು ಅಷ್ಟೊಂದು ಗಂಭೀರ ಲಕ್ಷಣಗಳನ್ನು ಹೊಂದಿಲ್ಲ ಎಂಬ ಸಮಾಧಾನಕಾರ ಸುದ್ದಿ ಒಂದೆಡೆಯಾದರೆ ಈ ರೂಪಾಂತರಿಯ ಆಗಮನದ ಬಳಿಕ ಆಸ್ಪತ್ರೆಗೆ ದಾಖಲಾಗುತ್ತಿರುವವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚಿದೆ ಎಂಬ ಮಾತನ್ನು ತಳ್ಳಿ ಹಾಕುವಂತಿಲ್ಲ. 12ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೇ ಹೆಚ್ಚಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.
15- 18 ವರ್ಷದವರಿಗೆ ಮಾತ್ರ ಲಸಿಕೆ :
ಕೊರೊನಾ ಮೂರನೇ ಅಲೆಯಿಂದ ಬಚಾವಾಗುವ ಸಲುವಾಗಿ ದೇಶದಲ್ಲಿ ಆರೋಗ್ಯ, ಮುಂಚೂಣಿ ಸಿಬ್ಬಂದಿ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಬೂಸ್ಟರ್ ಡೋಸ್ ನೀಡುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಅದರಂತೆ 15 -18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ಕೊರೊನಾ ಮೂರನೇ ಅಲೆಯಲ್ಲಿ ಡೇಂಜರ್ ಝೋನ್ನಲ್ಲಿರುವ 12 ವರ್ಷಕ್ಕಿಂತ ಕಿರಿಯ ಮಕ್ಕಳಿಗೆ ಮಾತ್ರ ಯಾವುದೇ ಲಸಿಕೆಗಳೂ ದೇಶದಲ್ಲಿ ಲಭ್ಯವಿಲ್ಲ.
ಕೊರೊನಾ ಮೂರನೇ ಅಲೆಗೆ ಸಿದ್ಧವಾಗಿರುವ ಕರ್ನಾಟಕದಲ್ಲಿ ಈಗಾಗಲೇ ಮಕ್ಕಳಿಗೆಂದು ಪ್ರತ್ಯೇಕ ವಾರ್ಡ್ಗಳನ್ನು ಆಸ್ಪತ್ರೆಗಳಲ್ಲಿ ನಿರ್ಮಿಸಿದ್ದಾರೆ. ಮಕ್ಕಳ ಜೊತೆಯಲ್ಲಿ ಪೋಷಕರಿಗೂ ಇರಲು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ಕೊರೊನಾ ಬಂದ ಬಳಿಕ ಕಳವಳ ಹೊರ ಹಾಕುವ ಮುನ್ನ ಮನೆಯಿಂದ ಹೊರಡುವ ವೇಳೆ ಮಕ್ಕಳಿಗೆ ಮಾಸ್ಕ್ ಧರಿಸುವಂತೆ ಹೇಳಿ ಸಾಮಾಜಿಕ ಅಂತರದ ಮಹತ್ವದ ಬಗ್ಗೆ ಪಾಠ ಮಾಡಿದರೆ ಓಮಿಕ್ರಾನ್ ಭೂತದಿಂದ ಪಾರಾಗಬಹುದಾಗಿದೆ.
Coronavirus Third Wave Dangerous For Children
ಇದನ್ನು ಓದಿ : Private Hospital Corona Treatment : ರಾಜ್ಯದಲ್ಲಿ ಏರುತ್ತಲೇ ಇದೆ ಕೊರೋನಾ : ಚಿಕಿತ್ಸೆಗೆ ಸಜ್ಜಾದ ಖಾಸಗಿ ಆಸ್ಪತ್ರೆಗಳು
ಇದನ್ನೂ ಓದಿ : Mekedatu Padayatra : ಡಿಕೆಶಿಗೆ ನಿಯಮ ಉಲ್ಲಂಘನೆ ನೊಟೀಸ್ : ಬಿಜೆಪಿ ನೊಟೀಸ್ ಗೆ ಹೆದರಲ್ಲ ಅಂದ್ರು ಕನಕಪುರ ಬಂಡೆ