Kazakhstan: ಕಜಕಿಸ್ತಾನದಲ್ಲಿ 164 ಪ್ರತಿಭಟನಾಕಾರರ ಮರಣ: 5,800 ಮಂದಿ ಬಂಧನ

ಮಾಸ್ಕೊ: ತೈಲ ನಿಕ್ಷೇಪಗಳನ್ನು(Oil Reserves) ಹೊಂದಿರುವ ಕಜಕಿಸ್ತಾನ(Kazakhstan)ದಲ್ಲಿ ಇಂಧನ ದರ ಏರಿಕೆ ಆಗಿರುವುದನ್ನು ವಿರೋಧಿಸಿ ದೇಶದ ಅನೇಕ ಭಾಗಗಳಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಇದು ಹಿಂಸಾರೂಪ ಪಡೆದ ಕಾರಣ 164 ಮಂದಿ ಸಾವನ್ನಪ್ಪಿದ್ದಾರೆ. ಸತ್ತವರ ಪೈಕಿ ಭದ್ರತಾ ಪಡೆಯ ಸಿಬ್ಬಂದಿಯೂ ಸೇರಿದಾರೆ ಎಂದು ಸರ್ಕಾರ ತಿಳಿಸಿದೆ. ಹಿಂಸಾಚಾರ ಸಂಬಂಧ 5,800 ಮಂದಿಯನ್ನು ಬಂಧಿಸಲಾಗಿದೆ ಎಂದೂ ಗೃಹ ಸಚಿವಾಲಯ ಮಾಹಿತಿ ನೀಡಿದೆ.

ಹಿಂಸಾಚಾರದ ಹಿಂದೆ ವಿದೇಶದ ಪಟ್ಟಭದ್ರರ ಕೈವಾಡ ಇದೆ. ಹಿಂಸಾಚಾರ ನಡೆಸುತ್ತಿರುವವರು ಉಗ್ರವಾದಿಗಳು. ಸರ್ಕಾರವನ್ನು ಬೀಳಿಸಲು ಹೀಗೆ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಇದಕ್ಕೆಲ್ಲಾ ಜಗ್ಗುವುದಿಲ್ಲ. ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಕಜಕಿಸ್ತಾನ ಸರ್ಕಾರ ಹೇಳಿದೆ.

ಕಜಕಿಸ್ತಾನದ ಅತಿದೊಡ್ಡ ನಗರವಾದ ಅಲ್ಮಾಟಿದಲ್ಲಿ ತೀವ್ರ ಹಿಂಸಾಚಾರ ನಡೆದಿದ್ದು, ಸರ್ಕಾರಿ ಕಟ್ಟಡಗಳು ಪ್ರತಿಭಟನಾಕಾರ ವಶ ಆಗಿದೆ. 103 ಜನರು ಮೃತಪಟ್ಟಿದ್ದಾರೆ. ಈ ಪೈಕಿ ನಾಲ್ಕು ವರ್ಷದ ಹೆಣ್ಣುಮಗು ಸಹಿತ ಅನೇಕ ಮಕ್ಕಳು ಮರಣಿಸಿದ್ದಾರೆಂದು ಮಾನವಹಕ್ಕುಗಳ ಸಂಘಟನೆ ಹೇಳಿದೆ. ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಭದ್ರತಾಪಡೆಯ 1,300 ಮಂದಿ ಕೂಡ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಂತರಿಕ ಪ್ರತಿಭಟನೆಯನ್ನು ಹತ್ತಿಕ್ಕಲು ಕಜಕಿಸ್ತಾನದ ಸರ್ಕಾರ ರಷ್ಯಾ ಸೇನೆಯನ್ನು ಕರೆಸಿದ್ದು ಯಾಕೆ ಎಂದು ಅಮೆರಿಕ ಪ್ರಶ್ನಿಸಿದೆ. ರಷ್ಯಾದ ಸೇನೆ ಮನಬಂದಂತೆ ಗುಂಡು ಹಾರಿಸಿ ನಾಗರಿಕರನ್ನು ಕೊಂದಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಆಪಾದಿಸಿದ್ದಾರೆ.

ಕೇರಳದವರ ರಕ್ಷಣೆಗೆ ಆಗ್ರಹ:
ಕಜಕಿಸ್ತಾನದಲ್ಲಿ ಸಿಲುಕಿರುವ ಕೇರಳದವರನ್ನು ರಕ್ಷಣೆ ಮಾಡುವಂತೆ ಕೇರಳದ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳ ಸಹಿತ ಕೇರಳದ ಸಾವಿರಾರು ಜನರು ಕಜಕಿಸ್ತಾನದಲ್ಲಿ ನೆಲೆಸಿದ್ದಾರೆ. ಇಂಟರ್ನೆಟ್ ಸಹಿತ ಎಲ್ಲ ಸಂವಹನಗಳನ್ನು ಅಲ್ಲಿನ ಸರ್ಕಾರ ನಿರ್ಬಂಧ ಮಾಡಿರುವ ಕಾರಣ, ಅವರ ಸ್ಥಿತಿಗತಿ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಇವರನ್ನು ರಕ್ಷಿಸಿ ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Truth Social : ಡೊನಾಲ್ಡ್ ಟ್ರಂಪ್ ಆರಂಭಿಸಲಿರುವ ಟ್ರುತ್ ಸೋಷಿಯಲ್ ಆ್ಯಪ್ ಬಿಡುಗಡೆಗೆ ಸಕಲ ಸಿದ್ಧತೆ; ಟ್ವಿಟರ್‌ಗೆ ಕೊಡಲಿದೆಯಾ ಟಕ್ಕರ್?

(Kazakhstan 164 Died in Protest)

Comments are closed.