ಹೊಸದಿಲ್ಲಿ : ದೇಶದಲ್ಲಿ ಯುಕೆ ವೈರಸ್ ಸೋಂಕಿನ ಅಬ್ಬರ ಹೆಚ್ಚುತ್ತಿದೆ. ಬ್ರಿಟನ್ ನಿಂದ ವಾಪಾಸಾದ 13 ಮಂದಿಯಲ್ಲಿ ಹೊಸ ಕೊರೊನಾ ಸೋಂಕು ಪತ್ತೆಯಾಗಿದ್ದು. ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಅಲ್ಲದೇ ರಾಜ್ಯದಲ್ಲಿ ಹೊಸದಾಗಿ 4 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಬ್ರಿಟನ್‌ನಲ್ಲಿ ರೂಪಾಂತರಿ ಕೊರೊನಾ ವೈರಸ್ ಸೋಂಕು ಪತ್ತೆಯಾದ ಬೆನ್ನಲ್ಲೇ ದೇಶದಲ್ಲಿಯೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೂ ಯುಕೆ ವೈರಸ್ ಸೋಂಕು ದೇಶದಲ್ಲಿ ನಿಧಾನವಾಗಿ ಏರಿಕೆಯಾಗುತ್ತಿದೆ. ಆರಂಭದಲ್ಲಿ ರೂಪಾಂತರಿ ಕೊರೊನಾ ಸೋಂಕನ್ನು ಪತ್ತೆಹಚ್ಚುವಲ್ಲಿ ವಿಳಂಭವಾಗಿದ್ದು, ಇದೀಗ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಹೊಸ ಕೊರೊನಾ ಸೋಂಕಿತರ ಪೈಕಿ ಕರ್ನಾಟಕ ರಾಜ್ಯದಲ್ಲಿಯೇ ಅತೀ ಹೆಚ್ಚು ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಒಂದೇ ಕುಟುಂಬದ 3 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದೀಗ ಮತ್ತೆ 4 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ.
ರೂಪಾಂತರಿ ವೈರಸ್ ತಳಿ ತನ್ನದೇ ಆದ ಓಟವನ್ನು ಹೊಂದಿರಬಹುದು. ಇದು ಈಗಾಗಲೇ ಅನೇಕ ದೇಶಗಳಿಗೆ ಪ್ರಯಾಣಿಸಿದೆ. ಆದ್ದರಿಂದ ನಾವು ಬಹಳ ಜಾಗರೂಕರಾಗಿರಬೇಕು. ಆರಂಭದಲ್ಲಿ ಪ್ರಸರಣ ಸರಪಳಿ ಚಿಕ್ಕದಾದ ಕಾರಣ ವೈರಸ್ ಹರಡುವುದನ್ನು ನಿಗ್ರಹಿಸುವುದು ಸುಲಭ, ಎಂದು ನಿತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಹೇಳಿದ್ದಾರೆ.