ಉಡುಪಿ : ಕೊರೊನಾ ಪಾಸಿಟಿವಿಟಿ ದರ ಹೆಚ್ಚಳವಾದ ಬೆನ್ನಲ್ಲೇ ಇದೀಗ ಉಡುಪಿ ಜಿಲ್ಲೆಯಲ್ಲಿ ವೀಕೆಂಡ್ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದಾರೆ.
ಇಂದು (ಶುಕ್ರವಾರ) ರಾತ್ರಿ 9.00 ಗಂಟೆಯಿಂದ ವೀಕೆಂಡ್ ಕರ್ಪ್ಯೂ ಆರಂಭಗೊಳ್ಳಲಿದ್ದು, ಸೋಮವಾರ ಬೆಳಿಗ್ಗೆ 5.00 ಗಂಟೆಯವರೆಗೆ ಜಾರಿಯಲ್ಲಿರಲಿದೆ. ತುರ್ತು ಹಾಗೂ ಅಗತ್ಯ ಸೇವೆಯನ್ನು ಹೊರತು ಪಡಿಸಿ ಜನರ ಓಡಾಟಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಆದರೆ ಸೇವಾವಲಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂಧಿಗಳಿಗೆ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡಲಾಗಿದ್ದು, ತಮ್ಮ ಐಡಿ ಕಾರ್ಡ್ ತೋರಿಸಿ ಸಂಚರಿಸಬಹುದಾಗಿದೆ.
ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಮತ್ತು ಪ್ರಾಣಿಗಳ ಮೇವನ್ನು ವ್ಯಾಪಾರ ಮಾಡುವ ಅಂಗಡಿಗಳಿಗೆ ಬೆಳಿಗ್ಗೆ 5.00 ರಿಂದ ಅಪರಾಹ್ನ 2.00 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ಬೀದಿಬದಿ ವ್ಯಾಪಾರಸ್ಥರು ಬೆಳಿಗ್ಗೆ 5.00 ರಿಂದ ಅಪರಾಹ್ನ 2.00 ವ್ಯಾಪಾರ ಕೈಗೊಳ್ಳಬಹುದು. ಸಾರ್ವಜನಿಕ ವಿತರಣಾ ವ್ಯವಸ್ಥೆ(PDS)ಯ ಅಂಗಡಿಗಳಿಗೆ ಅವಕಾಶವಿದೆ ಬೆಳಿಗ್ಗೆ 5.00 ರಿಂದ ಅಪರಾಹ್ನ2.00 ಗಂಟೆಯ ವರೆಗೆ ಕಾರ್ಯ ನಿರ್ವಹಣೆ ಮಾಡಲು ಅವಕಾಶವಿರುತ್ತದೆ. ಮದ್ಯದಂಗಡಿಗಳು ಬೆಳಿಗ್ಗೆ 5.00 ರಿಂದ ಅಪರಾಹ್ನ 2.00 ರವರೆಗೆ ಪಾರ್ಸೆಲ್‌ಗೆ ಮಾತ್ರವೇ ಅವಕಾಶವಿದೆ. ಇನ್ನು ಆನ್ ಲೈನ್ ಮೂಲಕ ಪಾರ್ಸೆಲ್‌ಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ. ಹಾಲಿನ ಡೈರಿ ಹಾಗೂ ಬೂತ್‌ಗಳು ಬೆಳಿಗೆ 5.00 ರಿಂದ ರಾತ್ರಿ 8.00 ಗಂಟೆಯವರೆಗೆ ಕಾರ್ಯಚರಿಸ ಬಹುದಾಗಿದೆ. ಇನ್ನು ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಕೇವಲ ಪಾರ್ಸೆಲ್‌ಗೆ ಮಾತ್ರವೇ ಅವಕಾಶ ನೀಡಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರು, ಸ್ವಾಯತ್ತ ಸಂಸ್ಥೆಗಳು, ನಿಗಮ, ತುರ್ತು ಸೇವೆ, ಕೋರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುವವರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಕೃಷಿ, ಹೈನುಗಾರಿಕೆ ಮಾಡುವವರಿಗೆ ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ. ಖಾಸಗಿ ಕಂಪೆನಿಗಳ ನೌಕರರು ಸಾಧ್ಯವಾದಷ್ಟು ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಬಸ್, ರೈಲು, ವಿಮಾನ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಟ್ಯಾಕ್ಸಿ ಹಾಗೂ ಖಾಸಗಿ ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧವನ್ನೂ ಹೇರಿಲ್ಲ. ಆದರೆ ಪ್ರಯಾಣಿಕರು ಪ್ರಯಾಣದ ಸಂದರ್ಭದಲ್ಲಿ ಪ್ರಯಾಣದ ದಾಖಲೆ ಅಥವಾ ಟಿಕೆಟ್ ತೋರಿಸುವುದು ಕಡ್ಡಾಯವಾಗಿದೆ.
ಈಗಾಗಲೇ ನಿಗದಿಯಾಗಿರುವ ಮದುವೆ, ಕೌಟುಂಬಿಕ ಶುಭ ಸಮಾರಂಭಗಳನ್ನು ಸರಕಾರದ ಹಿಂದಿನ ಮಾರ್ಗಸೂಚಿಯಂತೆ ನಿರ್ವಹಿಸಲು ಅವಕಾಶ ನೀಡಲಾಗಿದೆ. ಆದರೆ ಸರಕಾರದ ನಿಯಮದಂತೆ ಸಭಾಂಗದಣದ ಸಾಮರ್ಥ್ಯಕ್ಕೆ ತಕ್ಕಂತೆ ಶೇ 50 ರಷ್ಟು ಹಾಗೂ ಗರಿಷ್ಟ 400 ಜನರಿಗೆ ನಡೆಸಲು ಅವಕಾಶ ನೀಡಲಾಗಿದೆ. ಮದುವೆ, ಕೌಟುಂಬಿಕ ಕಾರ್ಯಕ್ಕೆ ತಹಶೀಲ್ದಾರ್ ಅವರಿಂದ ಅನುಮತಿಯನ್ನು ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಮದುವೆ ಸಮಾರಂಭಕ್ಕೆ ತಹಶೀಲ್ದಾರರು ಕೇವಲ 400 ಪಾಸ್‌ಗಳನ್ನು ವಿತರಿಸಲು ಮಾತ್ರವೇ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಪಾಸ್ ಹೊಂದಿರುವವರು ಮಾತ್ರವೇ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು.
ಇನ್ನು ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಅಂತ್ಯಕ್ರಿಯೆಯಲ್ಲಿ ಗರಿಷ್ಠ 20 ಜನರು ಮಾತ್ರವೇ ಪಾಲ್ಗೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಆದರೆ ವಿದ್ಯಾರ್ಥಿಗಳ ಪ್ರಮಾಣ ಪತ್ರವನ್ನು ಆಧಿಕೃತವಾಗಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ಪಾಸ್ ಎಂದು ಪರಿಗಣಸಬೇಕು. ಜಿಲ್ಲಾಡಳಿತ ತಿಳಿಸಿರುವ ಮಾರ್ಗಸೂಚಿಯಲ್ಲಿನ ಅಂಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲವಾದ್ರೆ ಅಂತಹವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ : ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಲಾಕ್‌ಡೌನ್, ನೈಟ್ ಕರ್ಪ್ಯೂ ಜಾರಿ
ಇದನ್ನೂ ಓದಿ : ಸಾಸ್ತಾನ : ವಿಜಯನಗರದ ದೊರೆ ಇಮ್ಮಡಿ ದೇವರಾಯನ ಶಾಸನ ಪತ್ತೆ
(weekend curfew Udupi dc Kurma Rao release new Guidelines )