ಬ್ರಹ್ಮಾವರ : ಕೊರೊನಾ ವೈರಸ್ ಸೋಂಕು ಕೋಟ ಹೋಬಳಿಯಲ್ಲಿ ತನ್ನ ಆರ್ಭಟ ಮುಂದುವರಿದಿದ್ದು, ಇಂದು 5 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೋಟತಟ್ಟು -ಹಂದಟ್ಟು, ಮಣೂರು, ಕಾರ್ಕಡ ಹಾಗೂ ಹೊಸಾಳದಲ್ಲಿ ಸೋಂಕಿತರ ಮನೆಗಳನ್ನು ಕೋಟದ ಕಂದಾಯ ನಿರೀಕ್ಷಕರಾದ ರಾಜು ಅವರ ನೇತೃತ್ವದಲ್ಲಿ ಸೀಲ್ ಡೌನ್ ಮಾಡಲಾಗಿದೆ.

ಕುಂದಾಪುರದಲ್ಲಿ ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೋಟತಟ್ಟು ಗ್ರಾಮದ ಹಂದಟ್ಟುವಿನ ಇಬ್ಬರು ಯುವಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮನೆಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಸೋಂಕಿತರ ಜೊತೆಗೆ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಸಾಲಿಗ್ರಾಮದಲ್ಲಿ ಬಟ್ಟೆ ಅಂಗಡಿ ಮಾಲೀಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕಾರ್ಕಡದಲ್ಲಿರುವ ಸೋಂಕಿತರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ ಕುಂದಾಪುರದಲ್ಲಿ ಪೈಪ್ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಣೂರಿನ ವ್ಯಕ್ತಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಮಾತ್ರವಲ್ಲ ಹೊಸಾಳ ಗ್ರಾಮದಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ವ್ಯಕ್ತಿಯೋರ್ವರಿಗೆ ಕೊರೊನಾ ದೃಢಪಟ್ಟಿದೆ.

ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿ ಇರುವವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡಲಾಗುತ್ತಿದೆ. ಕೋಟ ಹೋಬಳಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದು ಆತಂಕವನ್ನು ಮೂಡಿಸಿದೆ.