ಬೆಂಗಳೂರು : ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿರೋ ಮಹಿಳೆಯ ಹೆರಿಗೆ ಮಾಡಿಸಿರೋ ಇಎಸ್ಐ ಆಸ್ಪತ್ರೆಗೆ ಇದೀಗ ಕೊರೊನಾ ಆತಂಕ ಎದುರಾಗಿದೆ. ಮಹಿಳೆಯ ಕೊರೊನಾ ಟೆಸ್ಟ್ ವರದಿಗಾಗಿ ಕಾಯುತ್ತಿದ್ದು, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂಧಿ ಹಾಗೂ ವೈದ್ಯರು ಆತಂಕಕ್ಕೆ ಒಳಗಾಗಿದ್ದಾರೆ.

ಬೆಂಗಳೂರಿನ ಪಾದರಾಯನಪುರದ ಗರ್ಭಿಣಿ ಮಹಿಳೆಯೋರ್ವರನ್ನು ರಾಜಾಜಿನಗರದ ಇಎಸ್ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಮಹಿಳೆಗೆ ಹೆರಿಗೆ ಮಾಡಿದ್ದರು, ಆದರೆ ಹೆರಿಗೆಯಾದ ನಂತರದಲ್ಲಿ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.

ಪಾದರಾಯನಪುರದಲ್ಲಿ 14ಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಮಹಿಳೆ ಕೂಡ ಪಾದರಾಯನಪುರದವರೇ ಆಗಿರೋದ್ರಿಂದ ಆತಂಕ ಶುರುವಾಗಿದೆ. ಮಾತ್ರವಲ್ಲ ಮಹಿಳೆಯ ಪತಿ ಕ್ವಾರಂಟೈನ್ ನಲ್ಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಅಲ್ಲದೇ ಮಹಿಳೆಗೆ ಹೆರಿಗೆ ಮಾಡಿಸಿರೊ ವೈದ್ಯರು, ಓಟಿ ಸಿಬ್ಬಂಧಿಗಳು, ಸ್ಟಾಪ್ ನರ್ಸ್ ಗಳು ಕೂಡ ಪಿಪಿಇ ಕಿಟ್ ಬಳಕೆ ಮಾಡಿಲ್ಲ, ಜೊತೆಗೆ ಯಾವುದೇ ಸುರಕ್ಷತಾ ಕ್ರಮಗಳನ್ನೂ ಅನುಸರಿಸಿಲ್ಲಾ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಸಾವನ್ನಪ್ಪಿರೋ ಮಹಿಳೆಯ ಗಂಟಲಿನ ದ್ರವನ್ನು ಕೊರೊನಾ ತಪಾಸಣೆಗೆ ಕಳುಹಿಸಲಾಗಿದ್ದು, ವೈದ್ಯರು ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ.

ಒಂದೊಮ್ಮೆ ಕೊರೊನಾ ಪಾಸಿಟಿವ್ ವರದಿ ಬಂದ್ರೆ ರಾಜಾಜಿನಗರದ ಇಎಸ್ ಐ ಆಸ್ಪತ್ರೆ ಬಂದ್ ಆಗಲಿದೆ. ಅಲ್ಲದೇ ಹೆರಿಗೆ ಮಾಡಿಸಿರೋ ವೈದ್ಯಕೀಯ ಸಿಬ್ಬಂಧಿಗಳನ್ನೂ ಕೂಡ ಕ್ವಾರಂಟೈನ್ ಗೆ ಒಳಪಡಿಸೋ ಸಾಧ್ಯತೆಯಿದೆ.