ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಳೆಯಿಂದ ಕಠಿಣ ರೂಲ್ಸ್ ಜಾರಿ ತರಲಾಗುತ್ತಿದೆ. ಆದ್ರೆ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ಸದ್ಯಕ್ಕೆ ಜಾರಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಗಡಿಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದರು. ಈ ವೇಳೆಯಲ್ಲ ಜಿಲ್ಲಾಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ್ದಾರೆ.
ಕೇರಳದಿಂದ ರಾಜ್ಯಕ್ಕೆ ಬರುವವರ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ. ಗಡಿ ಭಾಗದ ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ನೀಡುವ ಪ್ರಮಾಣವನ್ನು ಹೆಚ್ಚಳ ಮಾಡುವುದರ ಜೊತೆಗೆ ಕೊರೊನಾ ಟೆಸ್ಟಿಂಗ್ ಸಂಖ್ಯೆಯನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ. ಕೇಂದ್ರ ಸರಕಾರ ಸುಮಾರು ಒಂದೂವರೆ ಕೋಟಿ ಕೊರೊನಾ ಲಸಿಕೆಯನ್ನು ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಲಸಿಕೆ ನೀಡುವ ಕಾರ್ಯವನ್ನು ತೀವ್ರವಾಗಿ ನಡೆಸಲಾಗುವುದು ಎಂದಿದ್ದಾರೆ.
ರಾಜ್ಯದಲ್ಲಿ ಸದ್ಯ ಕಠಿಣ ನಿಯಮಗಳನ್ನು ಜಾರಿ ಮಾಡಲಾಗುತ್ತಿದೆ. ಆದರೆ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ಸದ್ಯಕ್ಕೆ ಜಾರಿ ಮಾಡುವುದಿಲ್ಲ. ಮುಂದಿನ 15 ದಿನಗಳ ಕಾಲ ಪರಿಶೀಲನೆಯನ್ನು ಮಾಡಿ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ.