food Poisoning : ಉರುಸ್‌ ವೇಳೆಯಲ್ಲಿ ಆಹಾರ ಸೇವನೆ : 50 ಕ್ಕೂ ಅಧಿಕ ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಬಾಗಲಕೋಟೆ : ಉರುಸ್‌ ವೇಳೆಯಲ್ಲಿ ಆಹಾರ ಸೇವಿಸಿ (food Poisoning) ಐವತ್ತಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ಬಾಗಲಕೋಟೆ ತಾಲೂಕಿನ ದೊಮನಲ್‌ ಗ್ರಾಮದಲ್ಲಿ ನಡೆದಿದೆ. ಈ ಪೈಕಿ ಸುಮಾರು 22 ಮಂದಿ ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ. ಅಸ್ವಸ್ಥಗೊಂಡಿರುವ ಎಲ್ಲರನ್ನೂ ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗ್ರಾಮದಲ್ಲಿ ಉರೂಸ್‌ ಧಾರ್ಮಿಕ ಕಾರ್ಯಕ್ರಮದ ವೇಳೆಯಲ್ಲಿ ನೆರೆದಿದ್ದವರು ಆಹಾರ ಸೇವನೆ ಮಾಡಿದ್ದಾರೆ. ಆಹಾರ ಸೇವನೆ ಮಾಡಿದ ಸುಮಾರು ಒಂದು ಗಂಟೆಯ ನಂತರ ವಾಂತಿ ಬೇಧಿ ಕಾಣಿಸಿಕೊಂಡಿದೆ. ಕೂಡಲೇ ಗ್ರಾಮಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳೂ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ನಂತರದಲ್ಲಿ ಒಬ್ಬೊಬ್ಬರಾಗಿಯೇ ಅಸ್ವಸ್ಥ ಗೊಂಡಿದ್ದಾರೆ. ಒಟ್ಟು 50 ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದು ಈ ಪೈಕಿ 12 ಮಂದಿ ಮಹಿಳೆಯರು ಹಾಗೂ 10 ಮಂದಿ ವೃದ್ದರಾಗಿದ್ದರೆ, 22 ಮಂದಿ ವಿದ್ಯಾರ್ಥಿಗಳು ಇದ್ದಾರೆ. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಯಶ್ರೀ ಅವರು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಗ್ರಾಮದಲ್ಲಿಯೇ ಮೊಕ್ಕಾಂ ಹೂಡಿದ್ದು, ಈಗಾಗಲೇ ನೀರು ಹಾಗೂ ಆಹಾರದ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ವರದಿ ಬಂದ ನಂತರದಲ್ಲಿ ಘಟನೆಗೆ ನಿಖರವಾದ ಕಾರಣ ತಿಳಿದು ಬರಲಿದೆ. ಅಸ್ವಸ್ಥಗೊಂಡಿರುವ ಎಲ್ಲರೂ ಕೂಡ ಚಿಕಿತ್ಸೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಎಷ್ಟು ಮಂದಿ ಆಹಾರವನ್ನು ಸೇವನೆ ಮಾಡಿದ್ದಾರೆ ಅನ್ನುವ ಕುರಿತು ಆರೋಗ್ಯ ಇಲಾಖೆ ಮಾಹಿತಿಯನ್ನು ಕಲೆ ಹಾಕುತ್ತಿದೆ. ಅಲ್ಲದೇ ಆಹಾರ ಸೇವನೆ ಮಾಡಿರುವ ಎಲ್ಲರನ್ನೂ ಕೂಡ ಆಸ್ಪತ್ರೆಗೆ ದಾಖಲಿಸಿ ತಪಾಸಣೆಯನ್ನು ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಉಡುಪಿ, ದಕ್ಷಿಣ ಕನ್ನಡ, ಮಲೆನಾಡಲ್ಲಿ ಭಾರೀ ಮಳೆ : ಹಳದಿ ಅಲರ್ಟ್‌ ಘೋಷಣೆ

ಇದನ್ನೂ ಓದಿ : ಭೀಕರ ಅಗ್ನಿದುರಂತ : 11 ಮಂದಿ ಸಜೀವ ದಹನ

( 50 people including 22 children Hospitalized with food Poisoning at Bagalkot)

Comments are closed.