ಮಂಗಳೂರು : ಖಾಸಗಿ ಶಾಲೆಯ ಶಿಕ್ಷಕಿಯೋರ್ವರು ಮನೆಯ ಬಾವಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ.
ಗ್ರೆಟ್ಟಾ ಡಿಸೋಜಾ (39 ವರ್ಷ) ಸಾವನ್ನಪ್ಪಿದ ದುರ್ದೈವಿ. ಮಂಗಳೂರು ನಗರ ಕುಲಶೇಖರದಲ್ಲಿ ವಾಸವಾಗಿದ್ದ ಗ್ರೆಟ್ಟಾ ಡಿಸೋಜಾ ಅವರು ಮಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೇ ಗೆಟ್ಟಾ ಡಿಸೋಜಾ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳು ಪುನರಾರಂಭವಾಗಿರಲಿಲ್ಲ. ಕೆಲಸವಿಲ್ಲದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಉಳಿದುಕೊಂಡಿದ್ದರು. ತಾವು ಖಿನ್ನತೆಗೆ ಒಳಗಾಗಿರುವ ಕುರಿತು ಆಪ್ತ ಸ್ನೇಹಿತರ ಬಳಿಯಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಶೈಕ್ಷಣಿಕ ಹಾಗೂ ಉದ್ಯೋಗದ ಸಮಸ್ಯೆಯ ಹಿನ್ನೆಲೆಯಲ್ಲಿಯೇ ಗ್ರೆಟ್ಟಾ ಅವರು ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎಂದು ಶಂಕಿಸಲಾಗುತ್ತಿದೆ. ಗ್ರೆಟ್ಟಾ ಡಿಸೋಜಾ ಅವರು ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಕಂಕನಾಡಿಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.