ಛತ್ತೀಸಗಢ:Dark Skin Taunts: : ಕಪ್ಪು ಹಾಗೂ ಬಿಳಿ ಬಣ್ಣದ ಚರ್ಮದಲ್ಲಿ ತಾರತಮ್ಯ ಮಾಡುವ ಪದ್ಧತಿ ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿದೆ. ಕಾಲ ಎಷ್ಟೇ ಮುಂದುವರಿದಿದ್ದರೂ ಸಹ ಈಗಲೂ ಕೂಡ ಕಪ್ಪು ಚರ್ಮದವರನ್ನು ಅಪಹಾಸ್ಯ ಮಾಡುವ ಅನೇಕರು ನಮ್ಮ ನಡುವೆ ಇದ್ದಾರೆ. ಇದೇ ರೀತಿ ತನ್ನ ಕಪ್ಪನೆಯ ಮೈ ಬಣ್ಣದ ಬಗ್ಗೆ ಪದೇ ಪದೇ ಅಪಹಾಸ್ಯ ಮಾಡುತ್ತಿದ್ದ ಪತಿಯ ನಡವಳಿಕೆಯಿಂದ ಮನನೊಂದಿದ್ದ ಪತ್ನಿ ಕೊಡಲಿಯಿಂದ ಕೊಚ್ಚಿ ಪತಿಯನ್ನು ಬರ್ಬರವಾಗಿ ಕೊಲೆಗೈದ ಘಟನೆಯು ಛತ್ತೀಸಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ನಲವತ್ತು ವರ್ಷದ ಅನಂತ್ ಸೋನ್ವಾನಿ ಎಂದು ಗುರುತಿಸಲಾಗಿದೆ. ಪತಿಯನ್ನು ಕೊಂದ ಆರೋಪದ ಅಡಿಯಲ್ಲಿ ಪತ್ನಿ ಸಂಗೀತಾ ಸೋನ್ವಾನಿ(30) ಎಂಬಾಕೆಯನ್ನು ಮಂಗಳವಾರ ಬಂಧಿಸಿದ್ದೇವೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ ದೇವಾಂಶ್ ರಾಥೋಡ್ ಮಾಹಿತಿ ನೀಡಿದ್ದಾರೆ .ಪ್ರಾಥಮಿಕ ತನಿಖೆಯಲ್ಲಿ ಪತಿ ಅನಂತ್ ಸೋನ್ವಾನಿ ಪದೇ ಪದೇ ತನ್ನ ಪತ್ನಿ ಸಂಗೀತಾ ಸೋನ್ವಾನಿಗೆ ಕುರೂಪಿ ಎಂದು ಹೀಯಾಳಿಸುತ್ತಿದ್ದ ಮಾತ್ರವಲ್ಲದೇ ಆಕೆಯ ಕಪ್ಪು ಚರ್ಮದ ಬಗ್ಗೆ ತೀವ್ರ ಅಸಮಾಧಾನವನ್ನು ಹೊರಹಾಕುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಅನೇಕ ಬಾರಿ ಪತಿ – ಪತ್ನಿ ನಡುವೆ ಕಲಹ ಏರ್ಪಟ್ಟಿತ್ತು ಎನ್ನಲಾಗಿದೆ.
ಭಾನುವಾರ ರಾತ್ರಿ ಕೂಡ ಪತಿ ಹಾಗೂ ಪತ್ನಿ ನಡುವೆ ಇದೇ ವಿಚಾರವಾಗಿ ಜಗಳ ಆರಂಭಗೊಂಡಿತ್ತು. ಪತಿಯು ತನ್ನ ಕಪ್ಪು ಚರ್ಮದ ಬಗ್ಗೆ ಹೀಯಾಳಿಸುತ್ತಿದ್ದುದನ್ನು ಸಹಿಸಲು ಸಾಧ್ಯವಾಗದೇ ಪತ್ನಿ ಸಂಗೀತಾ ಮನೆಯಲ್ಲಿದ್ದ ಕೊಡಲಿಯನ್ನು ಎತ್ತಿಕೊಂಡು ಬಂದು ಪತಿಯನ್ನು ಕೊಚ್ಚಿ ಹಾಕಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಗೀತಾ ಕೊಡಲಿಯಿಂದ ಪತಿಯ ಜನನಾಂಗವನ್ನೇ ಕತ್ತರಿಸಿ ಕೊಲೆ ಮಾಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ .
ಮಾರನೇ ದಿನ ತನ್ನ ಪತಿಯನ್ನು ಯಾರೋ ಕೊಂದಿದ್ದಾರೆ ಎಂದು ಹೇಳುವ ಮೂಲಕ ಸಂಗೀತಾ ಗ್ರಾಮಸ್ಥರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾಳೆ. ಆದರೆ ಪೊಲೀಸರ ತನಿಖೆ ಸಂದರ್ಭದಲ್ಲಿ ಸಂಗೀತಾ ತಾನೇ ಈ ಕೊಲೆಯನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ, ಪತಿಯು ನನ್ನ ಮೈಬಣ್ಣವನ್ನು ಹೀಯಾಳಿಸಿದ್ದನ್ನು ಸಹಿಸಲು ಸಾಧ್ಯವಾಗದೇ ಈ ಕೃತ್ಯ ಎಸಗಿದ್ದೇನೆ ಎಂದು ಹೇಳಿದ್ದಾಳೆ.
After Dark Skin Taunts, She Killed Husband With Axe, Chopped Off Genitals