ಗುವಾಹಟಿ : ನಿದ್ದೆ ಮಾಡಿದ್ದಾನೆ ಅನ್ನೋ ಕಾರಣಕ್ಕೆ ಕೋಪ ಗೊಂಡ ವೈದ್ಯನೋರ್ವ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕನಿಗೆ ಕಾದ ಬಿಸಿನೀರು ಎರಚಿದ್ದಾನೆ. ಗಾಯಗೊಂಡಿರುವ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯ ದಂಪತಿಯ ವಿರುದ್ದ ಪ್ರಕರಣ ದಾಖಲಾಗಿದೆ.

ಇಂತಹ ಅಮಾನವೀಯ ಘಟನೆ ನಡೆದಿರೋದು ಅಸ್ಸಾಂನ ದಿಬ್ರುಗ ಜಿಲ್ಲೆಯಲ್ಲಿ. 12 ವರ್ಷದ ಬಾಲಕನೋರ್ವ ತನ್ನ ತಾಯಿ ತೀರಿ ಕೊಂಡ ನಂತರದಲ್ಲಿ ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನಿವೃತ್ತ ವೈದ್ಯ ಸಿದ್ಧಿ ಪ್ರಸಾದ್ ಡ್ಯೂರಿ ಎಂಬಾತನ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದ.

ಆವತ್ತು ಬಾಲಕ ಕೆಲಸ ಮುಗಿದ ಮೇಲೆ ಸ್ವಲ್ಪ ಹೊತ್ತು ಮಲಗಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದ. ಇಷ್ಟಕ್ಕೆ ಕೋಪಗೊಂಡ ವೈದ್ಯ ಬಾಲಕನಿಗೆ ಬಿಸಿ ನೀರು ಸುರಿದಿದ್ದಾನೆ.

ವೈದ್ಯನ ದುಷ್ಕೃತ್ಯದಿಂದಾಗಿ ಬಾಲಕ ಗಾಯಗೊಂಡಿದ್ದ. ಈ ವೇಳೆಯಲ್ಲಿ ವೈದ್ಯನ ಪತ್ನಿ ಮಂಜುಲಾ ಮೊರನ್ ಬಾಲಕನಿಗೆ ಚಿಕಿತ್ಸೆ ಕೊಡಿಸುವ ಕಾರ್ಯವನ್ನು ಮಾಡಿದ್ದಾಳೆ. ವೈದ್ಯ ನಡೆಸಿದ ಅಮಾನವೀಯ ಕೃತ್ಯವನ್ನು ಸ್ಥಳೀಯರು ರೆಕಾರ್ಡ್ ಮಾಡಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರಿಗೆ ನೀಡಿದ್ದಾರೆ.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು ವೈದ್ಯರ ಮನೆಯಲ್ಲಿದ್ದ ಬಾಲಕನ್ನು ರಕ್ಷಿಸಿದ್ದಾರೆ. ಆದರೆ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ವೈದ್ಯ ದಂಪತಿ ಪರಾರಿಯಾಗಿದ್ದಾರೆ. ಈಗ ಬಾಲಕನಿಗೆ ಮಕ್ಕಳ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆತನ ಹೇಳಿಕೆಯನ್ನು ಪಡೆಯಲಾಗಿದೆ.

ಮಕ್ಕಳ ಮತ್ತು ಹದಿಹರೆಯದ ಕಾರ್ಮಿಕ ನಿಷೇಧ ಕಾಯ್ದೆ ಮತ್ತು ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ವೈದ್ಯ ದಂಪತಿವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪದ್ಮನಾಭ್ ಬರುವಾ ತಿಳಿಸಿದ್ದಾರೆ.